ಮಾಜಿ ಗನ್‌ಮ್ಯಾನ್ ಮೂಲಕ ಫೈರಿಂಗ್ ಮಾಡಿಸಿಕೊಂಡ ಸಂಶಯ
ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ನಡೆದಿದ್ದ ಫೈರಿಂಗ್ ಸುತ್ತ ಅನುಮಾನ ಮೂಡಿದೆ. ಇದು ನಕಲಿ ಶೂಟೌಟ್ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನಿಸಿದ್ದಾರೆ.
ರಿಕ್ಕಿ ರೈಗೆ ಒಂದು ಕಾಲದಲ್ಲಿ ಗನ್‌ಮ್ಯಾನ್ ಆಗಿದ್ದ ವಿಠ್ಠಲ ಎಂಬಾತ ಕಾರಿನ ಮೇಲೆ ಫೈರಿಂಗ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಗನ್‌ಮ್ಯಾನ್ ವಿಠ್ಠಲನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಠ್ಠಲ ಬಹುಕಾಲದವರೆಗೆ ರಿಕ್ಕಿ ರೈನ ಗನ್‌ಮ್ಯಾನ್ ಆಗಿದ್ದ. ಕೆಲ ಸಮಯದಿಂದ ಅನಾರೋಗ್ಯ ಕಾರಣ ಗನ್‌ಮ್ಯಾನ್ ಕೆಲಸ ಬಿಟ್ಟು ರಿಕ್ಕಿ ರೈಯ ಫಾರ್ಮ್ ಹೌಸ್‌ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾನೆ.
ಶೂಟೌಟ್ ನಡೆದ ರಾತ್ರಿ ವಿಠ್ಠಲನ ಜೊತೆಗೆ ರಿಕ್ಕಿ ರೈ ಬಹಳ ಹೊತ್ತು ಗುಪ್ತ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ರಿಕ್ಕಿ ರೈ ಕಾರಿನಲ್ಲಿ ಬೆಂಗಳೂರಿಗೆಂದು ಹೊರಡುವ ಸ್ವಲ್ಪ ಸಮಯದ ಮುನ್ನ ವಿಠ್ಠಲ ಫಾರ್ಮ್ ಹೌಸ್‌ನಿಂದ ಹೊರಗೆ ಹೋಗಿದ್ದಾನೆ. ಶೂಟೌಟ್ ನಡೆದು ರಿಕ್ಕಿ ಆಸ್ಪತ್ರೆ ಸೇರಿದ ಬಳಿಕ ವಿಠ್ಠಲ ಫಾರ್ಮ್ ಹೌಸ್‌ಗೆ ಬಂದಿದ್ದಾನೆ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ವಿಠ್ಠಲ ಮಡಿಕೇರಿ ಮೂಲದವನಾಗಿದ್ದು, ಆತನ ಬಳಿ ಎರಡು ಏರ್‌ಗನ್ ಮತ್ತು ಎರಡು ಲೈಸೆನ್ಸ್ ಇರುವ ಶಾಟ್ ಗನ್‌ಗಳಿವೆ ಎಂದು ತಿಳಿದು ಬಂದಿದೆ. ಈ ಕೇಸಿನಲ್ಲಿ ರಿಕ್ಕಿ ರೈಯ ಕಾರಿನ ಚಾಲಕ ಆರೋಪಿಗಳೆಂದು ಹೆಸರಿಸಿರುವ ನಾಲ್ಕು ಮಂದಿಯ ವಿರುದ್ಧ ಪೊಲೀಸರಿಗೆ ಇಷ್ಟರ ತನಕ ಬಲವಾದ ಸಾಕ್ಷಿಗಳು ಸಿಕ್ಕಿಲ್ಲ.
ಮುತ್ತಪ್ಪ ರೈ ಬಿಟ್ಟುಹೋಗಿರುವ 2,000 ಕೋಟಿ ರೂ.ಗೂ ಅಧಿಕ ಆಸ್ತಿಗಾಗಿ ಕಚ್ಚಾಟ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಫೈರಿಂಗ್ ನಾಟಕ ಆಡಲಾಗಿದೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.