ಆತ್ಮರಕ್ಷಣೆಗಾಗಿ ಕೊಲೆ ಮಾಡಬೇಕಾಯಿತು ಎಂದು ಹೇಳಿಕೆ
ಬೆಂಗಳೂರು : ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯಿಂದೀಚೆಗೆ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿಯನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದರು. ಇಂದು ಪಲ್ಲವಿಯನ್ನು ಬಂಧನಕ್ಕೊಳಪಡಿಸುವ ಔಪಚಾರಿಕತೆ ಮಾಡಲಾಯಿತು.
ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲೆ ಓಂ ಪ್ರಕಾಶ್ ನಿನ್ನೆ ಸಂಜೆ ಭೀಕರವಾಗಿ ಹತ್ಯೆಯಾಗಿದ್ದಾರೆ. ಪತ್ನಿ ಮತ್ತು ಮಗಳು ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪುತ್ರ ಕಾರ್ತಿಕೇಶ್ ನೀಡಿದ ದೂರಿನಂತೆ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಲ್ಲವಿ, ಪುತ್ರಿ ಕೃತಿ, ಪುತ್ರ ಕಾರ್ತಿಕೇಶ್ ಸೇರಿದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮೂರು ಮೊಬೈಲ್ ಸೀಜ್ ಮಾಡಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆತ್ಮರಕ್ಷಣೆಗಾಗಿ ಕೊಲೆ ಮಾಡಿರುವುದಾಗಿ ಪತ್ನಿ ಪಲ್ಲವಿ ಎಸಿಪಿ ವಾಸುದೇವ್ ಮುಂದೆ ಹೇಳಿಕೊಂಡಿದ್ದಾಳೆ.
ಮೊದಲು ಓಂ ಪ್ರಕಾಶ್ ಮೇಲೆ ಖಾರದ ಪುಡಿ ಎರಚಿ, ಬಳಿಕ ಅಡುಗೆ ಎಣ್ಣೆಯನ್ನೂ ಸುರಿದಿದ್ದಾರೆ. ಬಳಿಕ ಕೈ ಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದ್ದಾಗಿ ಪಲ್ಲವಿ ಮಾಹಿತಿ ನೀಡಿದ್ದಾರೆ. ಓಂ ಪ್ರಕಾಶ್‌ಗೆ 8-10 ಬಾರಿ ಇರಿಯಲಾಗಿದ್ದು, ಎದೆ, ಹೊಟ್ಟೆ, ಕೈಗೆ ಚಾಕುವಿನಿಂದ ಇರಿಯಲಾಗಿದೆ. ಹೊಟ್ಟೆ ಭಾಗಕ್ಕೆ 4-5 ಬಾರಿ ಇರಿದು ಹತ್ಯೆಗೈಯಲಾಗಿದೆ. ಆದರೆ ಆಜಾನುಬಾಹುವಾಗಿರುವ ಅಲ್ಲದೆ ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ವ್ಯಕ್ತಿಯನ್ನು ಹೆಂಗಸು ಒಬ್ಬಳೇ ಇಷ್ಟೆಲ್ಲ ಬರ್ಬರವಾಗಿ ಹತ್ಯೆ ಮಾಡಲು ಸಾಧ್ಯವೇ ಎಂಬ ಅನುಮಾನ ಉಳಿದುಕೊಂಡಿದೆ.
ಪತ್ನಿಯಿಂದ ಭೀಕರ ದಾಳಿಗೆ ಒಳಗಾದ ಓಂ ಪ್ರಕಾಶ್ 15 ರಿಂದ 20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾರೆ. ಗಂಡ ನೆಲಕ್ಕೆ ಬಿದ್ದು ನರಳಾಡೋದನ್ನ ಪಲ್ಲವಿ ನೋಡುತ್ತಾ ನಿಂತಿದ್ರಂತೆ. ಓಂ ಪ್ರಕಾಶ್ ಕೊನೆ ಉಸಿರು ಬಿಡೋವರೆಗೂ ಕಾಯುತ್ತಿದ್ದರಂತೆ. ಕೊನೆಗೆ ಪತಿ ಸತ್ತ ಬಳಿಕ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೃತ್ಯಕ್ಕೂ ಮೊದಲು ಕೆಲ ವ್ಯಕ್ತಿಗಳಿಗೆ ಪಲ್ಲವಿ ವಾಟ್ಸಾಪ್ನಲ್ಲಿ ಸಂದೇಶ ರವಾನೆ ಮಾಡಿದ್ದಾರೆ. ನನ್ನ ಗಂಡನ ಬಗ್ಗೆ ನಾನು ಹೇಳಿದ ಎಲ್ಲ ವಿಷಯಗಳು ಸರಿಯಾಗಿವೆ. ನನ್ನ ಪತಿ ಡಿಜಿ-ಐಜಿಪಿ ಆಗಿದ್ದಾಗ ಹಲವು ಅಧಿಕಾರಿಗಳು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಓಂ ಪ್ರಕಾಶ್ ಬಳಿ ರಿವಾಲ್ವರ್ ಇದೆ, ಅದನ್ನು ವಶಕ್ಕೆ ಪಡೆಯಬೇಕು ಎಂದು ಸಂದೇಶ ರವಾನಿಸಿದ್ದಾರೆ.
ಮಾನಸಿಕ ರೋಗಿ?
ತಾಯಿಗೆ ಸ್ಕಿಜೊಫ್ರೆನಿಯಾ ಎಂಬ ಮಾನಸಿಕ ಕಾಯಿಲೆ ಇದೆ. ಇದಕ್ಕಾಗಿ ಕಳೆದ ಸುಮಾರು 10 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದಾ ಗಂಡ ತನ್ನ ಮೇಲೆ ಹಲ್ಲೆ ಮಾಡುತ್ತಾರೆ, ಕೊಲ್ಲುತ್ತಾರೆ ಎಂದು ಸಂಶಯಪಡುತ್ತಿದ್ದರು. ಇದೇ ಭ್ರಮೆಯಲ್ಲಿ ದಿನವಿಡೀ ಇರುತ್ತಿದ್ದರು ಎಂದು ಪುತ್ರ ಕಾರ್ತಿಕೇಶ್ ತಿಳಿಸಿದ್ದಾರೆ. ಆದರೆ ಇದು ವೈದ್ಯಕೀಯವಾಗಿ ಇನ್ನೂ ದೃಢಪಟ್ಟಿಲ್ಲ.