ಪೂರೈಕೆ ಕೊರತೆ ಬೇಡಿಕೆ ಹೆಚ್ಚಳದಿಂದ ಕೆಜಿಗೆ 1,000 ರೂ. ಆಗುವ ಸಾಧ್ಯತೆ
ಮಂಗಳೂರು : ಕಾಳುಮೆಣಸು ಬೆಳೆದಿರುವ ರೈತರಿಗೆ ಬಂಪರ್ ಲಾಭ ಸಿಗಲಿದೆ. ಈಗಾಗಲೇ ಕೆಜಿಗೆ 750 ರೂ. ದಾಟಿ ಮುನ್ನುಗ್ಗುತ್ತಿರುವ ಕಾಳುಮೆಣಸು ಬೆಲೆ ಶೀಘ್ರ 1,000 ರೂ. ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಸಂಸ್ಥೆಯೊಂದು ಭವಿಷ್ಯ ನುಡಿದಿದೆ. ಕಳೆದ ಎರಡು ವರ್ಷಗಳಿಂದ ಶೇ.40ರಷ್ಟು ದರ ಏರಿಕೆ ಕಂಡಿರುವ ಕಾಳುಮೆಣಸು ಪೂರೈಕೆ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಕಾಳುಮೆಣಸು ದರ ಕೆಜಿಗೆ 900 ರಿಂದ 1,100 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಕರ್ನಾಟಕದಲ್ಲಿ ಹವಾಮಾನ ಬದಲಾವಣೆ, ಅಕಾಲಿಕ ಮಳೆ, ಬೆಳೆಗೆ ರೋಗಬಾಧೆ ಇತ್ಯಾದಿ ಕಾರಣಗಳಿಂದ ಕಾಳುಮೆಣಸು ಬೆಳೆ ಕುಸಿತವಾಗಿದೆ.
ವಿಯೆಟ್ನಾಂ, ಬ್ರಜಿಲ್ನಂತಹ ಕಾಳುಮೆಣಸು ಹೆಚ್ಚು ಬೆಳೆಯುವ ದೇಶಗಳಲ್ಲಿ ಬೆಳೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಇದರಿಂದಾಗಿ ಪೂರೈಕೆ ಮೇಲೆ ಹೊಡೆತ ಬಿದ್ದಿದೆ. ಮತ್ತೊಂದೆಡೆ ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಪೈಸ್ ಅಸೋಸಿಯೇಷನ್ ಮತ್ತು ಚಿಕ್ಕಮಗಳೂರು ಬೆಳೆಗಾರರ ಸಂಘ ತಿಳಿಸಿದೆ. ಕಳೆದ ವರ್ಷ ಬರಗಾಲದಿಂದಾಗಿ ಹೂ ಬಿಡುವುದು ವಿಳಂಬವಾಯಿತು ಮತ್ತು ನಂತರ ಹಠಾತ್ ಮಳೆಯಿಂದಾಗಿ ಬೆಳೆಯ ಮೇಲೆ ಪರಿಣಾಮ ಬೀರಿತು. ಇದು ಒಟ್ಟಾರೆ ಉತ್ಪಾದನೆ ಮೇಲೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಪ್ರಸಕ್ತ ಋತುವಿನಲ್ಲಿ ಉತ್ಪಾದನೆಯು ಶೇ.40ರಷ್ಟು ಕುಸಿತ ಕಂಡಿದೆ ಎಂದು ಕರ್ನಾಟಕ ಸ್ಪೈಸ್ ಅಸೋಸಿಯೇಷನ್‌ನ ಚಂದ್ರಶೇಖರ ರೆಡ್ಡಿ ತಿಳಿಸಿದ್ದಾರೆ.
ಕಾಳುಮೆಣಸು ಬೆಳೆಗೆ ತೇವಾಂಶವುಳ್ಳ ಗಾಳಿ, ನೆರಳು ಪ್ರದೇಶ ಮತ್ತು ಚೆನ್ನಾಗಿ ನೀರಿನ ಅಂಶವಿರುವ ಮಣ್ಣು ಬೇಕಾಗುತ್ತದೆ. ಪಶ್ಚಿಮ ಘಟ್ಟಗಳು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಾಳುಮೆಣಸು ಉತ್ಪಾದನೆಗೆ ಪೂರಕ ವಾತಾವರಣ ಇವೆ. ಆದರೂ ಕರ್ನಾಟಕದ ಅತಿಹೆಚ್ಚು ಕರಿಮೆಣಸು ಬೆಳೆಯುವ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರುಗಳಲ್ಲಿ ಹವಾಮಾನ ಬದಲಾವಣೆಯ ಹೊಡೆತ ಬಿದ್ದಿದೆ. ಇದರಿಂದಾಗಿ ಬೆಳೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸಿದೆ ಎಂದು ಕೃಷಿಕರು ತಿಳಿಸಿದ್ದಾರೆ. ಮಣ್ಣಿನಲ್ಲಿ ತೇವಾಂಶದ ಮಟ್ಟದ ಏರುಪೇರಿನಿಂದಾಗಿ ಶಿಲೀಂಧ್ರ ಸೋಂಕು ಹೆಚ್ಚಾಗಿದೆ. ಇದು ಬೆಳೆ ಕುಸಿತಕ್ಕೆ ಕಾರಣವಾಗಿದೆಎನ್ನಲಾಗಿದೆ.
ಮುಂದಿನ ಎರಡು ತಿಂಗಳವರೆಗೆ ಹೊಸ ಬೆಳೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇಲ್ಲ. ಈ ಪೂರೈಕೆ ಬಿಕ್ಕಟ್ಟು ಮುಂಬರುವ ತಿಂಗಳುಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ಪ್ಲಾಂಟರ್ಸ್ ಅಸೋಸಿಯೇಷನ್‌ನ ಜಗದೀಶ ಎಂ.ಕೆ ಅಭಿಪ್ರಾಯಪಟ್ಟಿದ್ದಾರೆ.