ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ.ರಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಕಳಿಯ ಶಾಖೆಯ ವತಿಯಿಂದ ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನದಲ್ಲಿ ಜರಗಿದ 15 ದಿನಗಳ ಮಕ್ಕಳ ವಸಂತ ಚೈತನ್ಯ ಶಿಬಿರದ ಸಮಾರೋಪವು ಭಾರತ ಮಾತಾ ಪೂಜನದೊಂದಿಗೆ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ತನ್ಮಯಕೃಷ್ಣ ವಹಿಸಿದ್ದರು. ಮುಖ್ಯ ಮಾತುಗಾರರಾಗಿದ್ದ ಯೋಗ ಬಂಧು ತುಕರಾಮ ಶಿಬಿರದಲ್ಲಿ ಪಡೆದ ಅನುಭವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳಾದ ಆದ್ಯವಿ, ಸನ್ನಿಧಿ, ಅರ್ಜುನ ಮತ್ತು ಪೋಷಕರಾದ ಮಾಜಿಯೋಧ ವಿಕ್ರಮ, ಶಿಕ್ಷಕಿ ವಿದ್ಯಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಆರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಯೋಗ ಬಂಧುಗಳು ಅಗ್ನಿಹೋತ್ರ ಮತ್ತು ಭಾರತ ಮಾತಾ ಪೂಜನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಮಾಹಿತಿ ನೀಡಿದರು. ಶಿಬಿರಾರ್ಥಿಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕರೊಂದಿಗೆ ಕೇಂದ್ರದ ಸಹ ಶಿಕ್ಷಕರಾದ ಸುಕೇಶ್, ಶಿಬಿರದ ಶಿಕ್ಷಕರಾದ ಸತೀಶ್ ಮತ್ತು ನಿತಿನ್, ಯೋಗಬಂಧು ದಿವಾಕರ ಆಚಾರ್ಯ ಗೇರುಕಟ್ಟೆ, ಭಾರತಿ ಶಿಬಿರದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ, ಕಳಿಯ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಸುಭಾಷಿಣಿ, ಕೇಶವ, ಸುಧಾಕರ ಮಜಲು, ರಾಜೇಶ್, ಅಶೋಕ ಆಚಾರ್ಯ, ವಸಂತ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಪ್ರಣಮ್ಯ ಪ್ರಾರ್ಥಿಸಿ ಅವಿನ್ಯು ಸ್ವಾಗತಿಸಿದರು. ಸನ್ನಿಧಿ ಶಿಬಿರದ ವರದಿ ವಾಚಿಸಿದರು. ಆಕರ್ಷ ಕಾರ್ಯಕ್ರಮ ನಿರೂಪಿಸಿ ಅದ್ವಿತ್ ವಂದಿಸಿದರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.