ಸೈಬರ್ ವಂಚಕರ ಮೋಸದಿಂದ ಮಠದ ಹಣವೆಲ್ಲ ಮಂಗಮಾಯ
ಭೋಪಾಲ : ಸೈಬರ್ ಖದೀಮರು ಮಠದ ಸ್ವಾಮೀಜಿಯನ್ನೇ ಡಿಜಿಟಲ್ ಅರೆಸ್ಟ್ ಮಾಡಿ 2.5 ಕೋ. ರೂ. ಲಪಟಾಯಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿರುವ ರಾಮಕೃಷ್ಣ ಮಿಶನ್ ಆಶ್ರಮದ ಕಾರ್ಯದರ್ಶಿ ಸುಪ್ರದೀಪ್ತಾನಂದ ಸ್ವಾಮೀಜಿ ಬರೋಬ್ಬರಿ 26 ದಿನ ಡಿಜಿಟಲ್ ಅರೆಸ್ಟ್ ಆಗಿ 2.5 ಕೋ. ರೂ. ಕಳೆದುಕೊಂಡಿದ್ದಾರೆ.
ಮಾ.15ರಂದು ಸ್ವಾಮೀಜಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತನ್ನನ್ನು ಇ.ಡಿ. ಅಧಿಕಾರಿ ಎಂದು ಪರಿಚಯಿಸಿಕೊಂಡು 20 ಕೋ. ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬಂದಿದೆ. ಜೆಟ್ ಏರ್‌ವೇಸ್‌ನ ನರೇಶ್ ಗೋಯಲ್ ಅವರ ಜೊತೆ ಅಕ್ರಮ ಹಣ ವರ್ಗಾವಣೆಯಲ್ಲಿ ಶಾಮೀಲಾಗಿದ್ದೀರಿ ಎಂದು ಬೆದರಿಸಿದ್ದ. ಹಣ ವರ್ಗಾವಣೆ ಆಗಿರುವುದಕ್ಕೆ ದಾಖಲೆ ಎಂದು ಕೆಲವು ಬ್ಯಾಂಕ್ ವ್ಯವಹಾರ, ಆಧಾರ್ ಕಾರ್ಡ್ ಇತ್ಯಾದಿಗಳನ್ನು ತೋರಿಸಿದ್ದ. ರಾಮಕೃಷ್ಣ ಮಿಶನ್‌ನ ಹಣದ ಮೂಲದ ಬಗ್ಗೆ ತನಿಖೆ ಆಗಬೇಕಿದೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಹೇಳಿದ ಖಾತೆಗೆ ಹಾಕಬೇಕು. ಎಲ್ಲ ಹಣ ತನಿಖೆ ಮುಗಿದ ಬಳಿಕ ಆರ್‌ಬಿಐಯಿಂದ ವಾಪಸು ಸಿಗಲಿದೆ. ತನಿಖೆ ನಡೆಯುವಷ್ಟು ದಿನ ನೀವು ಈ ವಿಚಾರವಾಗಿ ಯಾರ ಜೊತೆಗೂ ಮಾತನಾಡಬಾರದು ಮತ್ತು ವಾಟ್ಸಪ್‌ನಲ್ಲಿ ಪ್ರತಿ ತಾಸಿಗೊಮ್ಮೆ ನಮಗೆ ಮಾಹಿತಿ ನೀಡುತ್ತಿರಬೇಕು ಎಂದು ಬೆದರಿಸಿದ್ದ.
ತನ್ನ ಹೆಸರಿನಲ್ಲಿ ಹಣದ ವ್ಯವಹಾರ ಇರುವ ದಾಖಲೆಗಳನ್ನು ನೋಡಿ ಸ್ವಾಮೀಜಿ ಹೆದರಿಹೋಗಿದ್ದು, ಅವನ ಎಲ್ಲ ಮಾತಿಗೆ ಒಪ್ಪಿಕೊಂಡಿದ್ದಾರೆ. 26 ದಿನ ವಂಚಕರು ಕೇಳಿದ ಎಲ್ಲ ದಾಖಲೆಗಳನ್ನು ಕೊಟ್ಟಿದ್ದಾರೆ ಹಾಗೂ ಅವರು ಹೇಳಿದಂತೆ ಖಾತೆಗಳಿಗೆ ಹಣ ಜಮೆ ಮಾಡುತ್ತಾ ಹೋಗಿದ್ದಾರೆ.
ವಂಚಕರು ವಾಟ್ಸಪ್‌ನಲ್ಲಿ ಪ್ರತಿ ತಾಸಿಗೊಮ್ಮೆ ಅವರಿಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳುತ್ತಾ ಅವರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿದ್ದರು. ಯಾರ ಜತೆಗೂ ಮಾತನಾಡದಂತೆ ಬೆದರಿಸಿದ್ದರು. ಅವರು ಒಬ್ಬರೇ ಇದ್ದಾರೆ ಎಂದು ಖಾತರಿಪಡಿಸಿಕೊಳ್ಳಲು ಆಗಾಗ ಸೆಲ್ಫಿ ಫೋಟೊಗಳನ್ನು ತೆಗೆಸಿದ್ದರು. ಅವರ ಮಾತೆಲ್ಲವನ್ನೂ ನಂಬಿ ಆಶ್ರಮದ ಪ್ರಮುಖ ದಾಖಲೆಗಳನ್ನಜು ಕೊಟ್ಟಿದ್ದರು. ಬೇರೆ ಬೇರೆ ಖಾತೆಗಳಿಗೆ 2,52,99,000 ರೂಪಾಯಿ ವರ್ಗಾವಣೆ ಮಾಡಿದ್ದರು.
ಏ.11ರ ತನಕ ಆರ್‌ಬಿಐಯಿಂದ ಕೊಟ್ಟ ಹಣ ಮಠದ ಖಾತೆಗೆ ವಾಪಸು ಬಾರದೆ ಹೋದಾಗ ತನಗೆ ಬಂದ ವಾಟ್ಸಪ್ ನಂಬರ್‌ಗೆ ಕರೆ ಮಾಡಿದ್ದಾರೆ. ಆಗ ಸ್ವಿಚ್‌ಆಫ್ ಎಂದು ಬಂದಿದ್ದು, ಸ್ವಾಮೀಜಿಗೆ ತಾನು ಮೋಸ ಹೋದದ್ದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತಿದ್ದಾರೆ.