ದೇವಸ್ಥಾನಕ್ಕೆ ಬಳಸಿದ ಮರದ ಬದಲಾಗಿ 500 ಸಸಿ ನೆಡುವ ಸಂಕಲ್ಪ
ಕಾರ್ಕಳ : ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ನಾಡಿನಲ್ಲಿ ಕಲೆ, ಸಂಸ್ಕೃತಿ, ವೈವಿಧ್ಯಮಯ ಆಚಾರ ವಿಚಾರ, ಶಿಲ್ಪಕಲೆಗಳಿಗೆ ಪ್ರಸಿದ್ಧಿ ಪಡೆದ ಕಾರ್ಕಳದ ನಗರದಲ್ಲಿ ನಡೆಯುತ್ತಿರುವ ಶ್ರೀ ಮಾರಿಗುಡಿ ಬ್ರಹ್ಮಕಲಶೋತ್ಸವವು ಪರಿಸರ ಜಾಗೃತಿಗೆ ಸಾಕ್ಷಿಯಾಗಲಿದೆ. ದೇವಾಲಯದ ನವೀಕರಣದ ಕೆಲಸ ಕಾರ್ಯಗಳಿಗೆ ಅನೇಕ ಮರಗಳನ್ನು ಬಳಸಿದ್ದು, ಇದಕ್ಕೆ ಪ್ರತಿಯಾಗಿ 500 ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿಯ ಸಂಕಲ್ಪವನ್ನು ಜೀರ್ಣೊದ್ಧಾರ ಸಮಿತಿ ಹೊಂದಿದೆ.
ಅರಣ್ಯ ಇಲಾಖೆಯವರಿಂದ ತೆಳ್ಳಾರು ರಸ್ತೆಯಲ್ಲಿನ ಕುಂಬ್ರಪದವಿನಲ್ಲಿ ಜಾಗ ಕೇಳಿ ಪಡೆದಿದ್ದು, ಈ ಜಾಗದಲ್ಲಿ 500 ಸಸಿಗಳನ್ನು ನೆಟ್ಟು ಮುಂದಿನ 5 ವರ್ಷಗಳ ಕಾಲ ಅದರ ಪೋಷಣೆಯ ಅಂದರೆ ನೀರು, ಗೊಬ್ಬರ, ಕಳೆ ತೆಗೆಯುವ ಕೆಲಸದೊಂದಿಗೆ ಸಸಿ ಒಂದು ಹಂತದವರೆಗೆ ಬೆಳೆಯುವವರೆಗಿನ ಜವಾಬ್ದಾರಿಯನ್ನು ಸಮಿತಿ ನಿರ್ವಹಿಸಲಿದೆ.
ಹೊಸದೊಂದು ಸಂದೇಶ
ಒಂದು ದೇವಾಲಯದ ನಿರ್ಮಾಣವು ಆ ಪ್ರದೇಶದ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಆದರೆ ಗುಡಿಯ ನಿರ್ಮಾಣಕ್ಕೆ, ಕೆತ್ತನೆ ಕೆಲಸಗಳಿಗೆ ಅದೆಷ್ಟೋ ಮರಗಳನ್ನು ಕಡಿಯಲಾಗುತ್ತಿದ್ದು, ಇದರಿಂದ ನಮಗರಿವಿಲ್ಲದೆಯೆ ಪ್ರಕೃತಿಯು ವಿನಾಶದಂಚಿನತ್ತ ಸಾಗುತ್ತಿದೆ. ಆದರೆ ಕಡಿದ ಮರಗಳಿಂದ ಪ್ರಕೃತಿಗಾದ ನಷ್ಟವನ್ನು ಸರಿದೂಗಿಸುವ ಹೊಣೆಯು ನಮ್ಮದೆಂಬ ಸಂಕಲ್ಪದೊಂದಿಗೆ ದೇವಸ್ಥಾನದ ನಿರ್ಮಾಣಕ್ಕೆ ಕಡಿದ ಮರಗಳಿಗೆ ಪ್ರತಿಯಾಗಿ 500 ಸಸಿಗಳನ್ನು ನೆಡುವ ಯೋಜನೆಯೊಂದಿಗೆ ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಸಮಿತಿಯು ಇಡೀ ವಿಶ್ವಕ್ಕೆ ಒಂದೊಳ್ಳೆ ಸಂದೇಶ ನೀಡುತ್ತಿದೆ.
ಪ್ರಸ್ತುತ ಅಧಿಕ ತಾಪಮಾನವಿದ್ದು, ಬಿಸಿಲಿನ ಬೇಗೆ ಕಡಿಮೆಯಾದ ಬಳಿಕ ಸಸಿಗಳನ್ನು ನೆಡಲಾಗುತ್ತದೆ ಎಂದು ಸಮಿತಿಯು ನಿರ್ಧರಿಸಿದೆ. ಹೊಸದೊಂದು ವಿಶೇಷ ಪರಿಕಲ್ಪನೆಯೊಂದಿಗೆ ಮಾರಿಗುಡಿಯ ಬ್ರಹ್ಮಕಲಶವು ಕಾರ್ಕಳದ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ.