ವಕ್ಫ್ ಕಾನೂನು ವಿರುದ್ಧ ನಡೆದ ಪ್ರತಿಭಟನೆ ವೇಳೆ ವೈರಲ್ ಆದ ವೀಡಿಯೊ
ಮಂಗಳೂರು: ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ವಾಹನದಲ್ಲೇ ಪ್ರತಿಭಟನೆಕಾರರಿಗೆ ಡ್ರಾಪ್ ಕೊಡಲಾಗಿತ್ತು ಎಂಬ ವೀಡಿಯೊ ವೈರಲ್ ಆಗಿತ್ತು. ಹೆದ್ದಾರಿ ಬಂದ್ ಮಾಡಿದ ಪ್ರತಿಭಟನೆಕಾರರನ್ನು ಎಸಿಪಿ ವಾಹನದಲ್ಲೇ ಕರೆದೊಯ್ದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಲಾಗಿತ್ತು. ಆದರೆ ಇದು ಪ್ರತಿಭಟನೆಕಾರರಿಗೆ ಡ್ರಾಪ್ ಕೊಟ್ಟದ್ದಲ್ಲ, ಗಾಯಗೊಂಡ ಓರ್ವ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೀಡಿಯೊ ಎಂದು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ.
ಕಾರ್ಯಕ್ರಮ ಮುಗಿದ ಬಳಿಕ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ತಮ್ಮ ವಾಹನದಲ್ಲೇ ಕರೆದೊಯ್ದರು ಎಂಬ ವೀಡಿಯೊಕ್ಕೆ ಬಹಳ ಆಕ್ರೋಶ ವ್ಯಕ್ತವಾಗಿತ್ತು. ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಅವರ ಸರ್ಕಾರಿ ಕಾರಿನಲ್ಲಿ ಕೆಲ ಪ್ರತಿಭಟನಾಕಾರರನ್ನು ಕರೆದೊಯ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಇದು ಪ್ರತಿಭಟನಾಕಾರರನ್ನು ಸಾಗಿಸಿದ್ದು ಅಲ್ಲ. ಟೆಂಪೋ ಟ್ರಾವೆಲ್ಲರ್ ವಾಹನ ಬಾಲಕನೊಬ್ಬನಿಗೆ ಗುದ್ದಿತ್ತು. ಬಾಲಕನ ಕಾಲಿನ ಅದರ ಮೇಲೆ ಚಕ್ರ ಹರಿದು ಹೋಗಿತ್ತು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಎಸಿಪಿ ತಮ್ಮ ಕಾರಿನಲ್ಲಿ ಸಾಗಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವಾಗುವುದು ಪೊಲೀಸರ ಕರ್ತವ್ಯ. ಟೆಂಪೊ ಟ್ರಾವೆಲರನ್ನು ಪೊಲೀಸರು ವಶಪಡಿಸಿಕೊಂಡು ಚಾಲಕನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಾಗ ಅವನ ಜೊತೆ ಇತರರು ಇದ್ದರು ಎಂದು ನಗರ ಪೊಲೀಸ್ ಆಯುಕ್ತರು ಈ ಸ್ಪಷ್ಟೀಕರಣ ನೀಡಿದ್ದಾರೆ.
ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇದ್ದ ಮೈದಾನದಿಂದ ಹೊರಬಂದು ಹೆದ್ದಾರಿಯಲ್ಲಿ ನಿಂತಿದ್ದರು. ಪ್ರತಿಭಟನೆಗಾಗಿ ಹೆದ್ದಾರಿ ಬಂದ್ ಮಾಡುವ ಪ್ಲಾನ್ ಪೊಲೀಸರು ಮೊದಲು ಮಾಡಿದ್ದರೂ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಹೆದ್ದಾರಿ ಬಂದ್ ಮಾಡದೆ ವಾಹನ ಸಂಚಾರಕ್ಕೆ ಮುಕ್ತವಾಗಿಸಿದ್ದರು. ಆದರೆ ಮೈದಾನದಲ್ಲಿರಬೇಕಾದ ಪ್ರತಿಭಟನಾಕಾರರು ಹೆದ್ದಾರಿಗೆ ಬಂದು ನಿಂತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೆಲ ಗಂಟೆಗಳ ಕಾಲ ಸುಮಾರು 10 ಕಿ.ಮೀ ದೂರದವರೆಗೆ ವಾಹನಗಳು ನಿಂತಿದ್ದವು.