ಬ್ರಾಹ್ಮಣ ಸಮುದಾಯದವರ ಕ್ಷಮೆ ಕೇಳಿದ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌

ಫುಲೆ ಚಿತ್ರ ವಿವಾದ ಹಿನ್ನೆಲೆಯಲ್ಲಿ ಬ್ರಾಹ್ಮಣರನ್ನು ಹೀನ ಮಾತಿನಿಂದ ನೋಯಿಸಿದ್ದ ನಿರ್ದೇಶಕ

ಮುಂಬೈ: ಸಾವಿತ್ರಿಭಾಯಿ ಪುಲೆ ಜೀವನಾಧಾರಿತ ಸಿನಿಮಾವನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಬಾಲಿವುಡ್‌ನ ಖ್ಯಾತ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಕೊನೆಗೆ ಕ್ಷಮೆ ಯಾಚಿಸಿ ಈ ವಿವಾದವನ್ನು ಮುಕ್ತಾಯಗೊಳಿಸಲು ಪ್ರಯತ್ನಿಸಿದ್ದಾರೆ.
ಸಾವಿತ್ರಿಬಾಯಿ ಪುಲೆ ಜೀವಾಧಾರಿತ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿ ಯು ಸರ್ಟಿಫಿಕೇಟ್ ನೀಡಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಪ್ರಮುಖವಾಗಿ ಈ ಸಿನಿಮಾದಲ್ಲಿ ಬರುವ ಜಾತಿ ಆಧಾರಿತ ಹೆಸರುಗಳು, 3000 ವರ್ಷಗಳ ಗುಲಾಮಿ ಸೇರಿದಂತೆ ಕೆಲ ಡೈಲಾಗ್‌ಗಳಿಗೂ ಕತ್ತರಿ ಹಾಕುವಂತೆ ಸೂಚಿಸಿತ್ತು. ಈ ಸಿನಿಮಾವನ್ನು ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯ ವಿರೋಧಿಸಿತ್ತು. ವಿರೋಧ ಜಾಸ್ತಿ ಆಗುತ್ತಿದ್ದಂತೆ ಏ.11ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಏ.25ಕ್ಕೆ ಮುಂದೂಡಿಕೆಯಾಗಿತ್ತು.
ಸಿನಿಮಾ ಬಿಡುಗಡೆಗೆ ವಿಳಂಬಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾದಲ್ಲಿ ಅನುರಾಗ್‌ ಕಶ್ಯಪ್‌ ಪೋಸ್ಟ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದರು.
‘ಪಂಜಾಬ್ 95, ತೀಸ್, ಧಡಕ್ 2 ಈಗ ಫುಲೆ ಒಂದರ ಹಿಂದೊಂದು ಸಿನಿಮಾಗಳಿಗೆ ತಡೆ ಒಡ್ಡಲಾಗುತ್ತಿದೆ. ಜಾತೀವಾದಿ, ಧರ್ಮವಾದಿ, ಜನಾಂಗೀಯವಾದಿ ಸರಕಾರ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಹೆದರುತ್ತಿದೆ. ಅವರಿಗೆ ಯಾವುದು ಸಮಸ್ಯೆ ಎಂದು ಬಹಿರಂಗವಾಗಿ ಹೇಳಲು ಸಹ ಅವರಿಂದ ಸಾಧ್ಯವಾಗುತ್ತಿಲ್ಲ’ ಎಂದಿದ್ದರು ಅನುರಾಗ್ ಕಶ್ಯಪ್.
ಪ್ರಧಾನಿ ಮೋದಿ ಅವರು ಹೇಳಿರುವಂತೆ ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ, ಹಾಗಿದ್ದ ಮೇಲೆ ‘ಫುಲೆ’ ಸಿನಿಮಾ ಬಿಡುಗಡೆ ಮಾಡಲು ಸಮಸ್ಯೆ ಏನು? ಜಾತಿ ವ್ಯವಸ್ಥೆ ಇಲ್ಲ ಎಂದಾದಮೇಲೆ ನಿಮಗೇಕೆ ಉರಿಯುತ್ತಿದೆ ಎಂದು ‘ಫುಲೆ’ ಸಿನಿಮಾ ವಿರೋಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ಪ್ರಶ್ನೆ ಮಾಡಿದ್ದರು. ‘ಫುಲೆ’ ಸಿನಿಮಾ ಬಿಡುಗಡೆಗೆ ಮುಂಚೆಯೇ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದಾದ ಮೇಲೆ ಅವರು ಸಿನಿಮಾ ನೋಡಿದ್ದು ಹೇಗೆ? ಸೆನ್ಸಾರ್‌ನವರೇ ಸಿನಿಮಾ ಲೀಕ್ ಮಾಡಿದ್ದಾರಾ ಎಂದು ಕೇಳಿದ್ದರು. ಈ ಪೋಸ್ಟ್​ಗೆ ಬಂದ ಕಮೆಂಟ್ ಒಂದಕ್ಕೆ ‘ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೀನಿ’ ಎಂದು ಪ್ರತಿಕ್ರಿಯೆ ನೀಡಿದ್ದರು.
ಇದೀಗ ತಮ್ಮ ಪೋಸ್ಟ್​ಗೆ ಕ್ಷಮೆ ಕೇಳಿರುವ ಅನುರಾಗ್ ಕಶ್ಯಪ್, ‘ಇದು ನನ್ನ ಕ್ಷಮಾಪಣೆ, ನಾನು ಹೇಳಿದ ಮಾತುಗಳಿಗೆ ಅಲ್ಲ ಬದಲಿಗೆ ನನ್ನ ಪೋಸ್ಟ್​ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ಅದನ್ನು ದ್ವೇಷ ಪ್ರಸರಣಕ್ಕೆ ಬಳಸಿಕೊಳ್ಳುತ್ತಿರುವ ಕಾರಣಕ್ಕೆ. ಭಾರಿ ಸಂಸ್ಕಾರವಂತರು ಎನಿಸಿಕೊಂಡ ಸಮುದಾಯದವರು ಹೆಂಡತಿ, ಮಗಳು, ಗೆಳೆಯರ ಅತ್ಯಾಚಾರ, ಕೊಲೆಯ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಯಾವ ಹೇಳಿಕೆಯೂ ಈ ರೀತಿಯ ಬೆದರಿಕೆಗಳಿಗೆ ಅರ್ಹವಲ್ಲ. ಹೇಳಿರುವ ಮಾತುಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ, ಅದನ್ನು ನಾನು ಪಡೆಯುವುದೂ ಇಲ್ಲ’ ಎಂದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top