ಪುತ್ತೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪುತ್ತೂರು ವಿಧಾನ ಸಭಾಕ್ಷೇತ್ರಕ್ಕೆ ಮಾ.11 ರಂದು ಸಾಯಂಕಾಲ 5 ಗಂಟೆಗೆ ಕಾವುನಲ್ಲಿ ಸ್ವಾಗತಿಸಿ, 5.30ಕ್ಕೆ ಪುತ್ತೂರು ವೆಂಕಟ್ರಮಣ ದೇವಸ್ಥಾನ ಸಮೀಪದಲ್ಲಿ ಸಮಾವೇಶ ನಡೆಯಲಿದೆ. ಚುನಾವಣೆಯ ದಿಕ್ಸೂಚಿಯಾಗಿ ಈ ಸಮಾವೇಶ ನಡೆಯಲಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಸಭಾ ಚುನಾವಣೆಯ ದೃಷ್ಠಿಕೋನದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಿದೆ. ನಾಲ್ಕು ತಂಡಗಳಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಈ ಪ್ರವಾಸ ಮಾಡಲಿದ್ದು, ಅದರ ಒಂದು ತಂಡ ಈ ಭಾಗದಲ್ಲಿ ಪ್ರವಾಸ ಮಾಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಕಂದಾಯ ಸಚಿವ ಆರ್. ಅಶೋಕ್, ಮಾಜಿ ಸಚಿವ ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಈ ಸಂದರ್ಭ ಉಪಸ್ಥಿತರಿರುವರು ಎಂದು ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ವಿಶೇಷ ಅಭ್ಯಾಗತರಾಗಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಪ್ರಹ್ಲಾದ್ ಜೊಷಿ, ಅಣ್ಣಾಮಲೈ ಅವರಲ್ಲಿ ಒಬ್ಬರನ್ನು ರಾಜ್ಯದಿಂದ ನೀಡಲಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯುವ ಸಮಾವೇಶದಲ್ಲಿ ಪ್ರತಿ ಬೂತ್ ನಿಂದ ಕನಿಷ್ಠ 100 ಮಂದಿಯಂತೆ ಭಾಗವಹಿಸಲಿದ್ದಾರೆ. ಶಕ್ತಿ ಕೇಂದ್ರಕ್ಕೆ ಒಬ್ಬರಂತೆ ಪ್ರಭಾರಿಗಳನ್ನು ನೀಡಲಾಗಿದ್ದು, 54 ಶಕ್ತಿಕೇಂದ್ರಗಳ ಪ್ರಮುಖರ ನೇತೃತ್ವದಲ್ಲಿ ಮನೆ ಸಂಪರ್ಕ ಕಾರ್ಯ ಮಾಡಲಾಗುತ್ತಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾ.9 ರಂದು 220 ಬೂತ್ ಗಳಲ್ಲಿ ಪ್ರಭಾರಿಗಳು, ಶಕ್ತಿಕೇಂದ್ರದವರು ಮನೆ ಸಂಪರ್ಜ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ಯಾತ್ರೆಯ ಸಂಚಾಲಕ ಸುನಿಲ್ ದಡ್ಡು, ಸಹ ಸಂಚಾಲಕರಾದ ಶಿವಕುಮಾರ್, ಯತೀಂದ್ರ ಕೊಚ್ಚಿ ಉಪಸ್ಥಿತರಿದ್ದರು.