ಪುತ್ತೂರು: ವಕ್ಫ್ ತಿದ್ದುಪಡಿ ಕಾಯ್ದೆ ಸಾಂವಿಧಾನಿಕವಾಗಿ ಅಂಗೀಕಾರಗೊಂಡು, ರಾಷ್ಟ್ರಪತಿಯವರಿಂದಲೂ ಅಂಕಿತಗೊಂಡು ಪೂರ್ಣ ಪ್ರಮಾಣದ ಕಾಯ್ದೆಯಾಗಿ ರೂಪುಗೊಂಡಿದ್ದು, ಈ ಕಾಯ್ದೆ ಜಾರಿಯಾಗುತ್ತಿದ್ದಂತೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನ ಹಿಂಬಾಗಿಲಿನ ಕುಮ್ಮಕ್ಕಿನಿಂದ ಅಲ್ಲಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಹುನ್ನಾರ ಖಂಡನೀಯ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನ ಶಾಸಕರು ತರಾತುರಿಯಲ್ಲಿ ಮುಸಲ್ಮಾನರನ್ನು ತುಷ್ಠೀಕರಣ ಮಾಡುವ ಭರದಲ್ಲಿ ಬಡ ಹಾಗೂ ಹಿಂದುಳಿದ ಮುಸಲ್ಮಾನರಿಗಾಗಿ ಅನುಕೂಲವಾಗಲು ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಬುಡಮೇಲು ಮಾಡುತ್ತೇನೆ, ರಾಜ್ಯದಲ್ಲಿ ಈ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ತಿಳಿಸಿದರು.
ಸಂಸತ್ತಿನ ಜಂಟಿ ಸಮಿತಿಯಲ್ಲಿ, ಸದನದಲ್ಲಿ ಸುದೀರ್ಘ ಚರ್ಚೆಯಾಗಿ ಬಹುಮತದಿಂದ ಪಾಸಾಗಿರುವ ಕಾಯ್ದೆ ಇದಾಗಿದ್ದು, ಮುಸಲ್ಮಾನರ ತುಷ್ಠೀಕರಣದ ಮೂಲಕ ಓಟ್ ಬ್ಯಾಂಕ್ ನ್ನಾಗಿ ಮಾಡಿ ಮುಗ್ದ ಬಡ ಮುಸ್ಲಿಮರ ತಲೆ ಕೆಡಿಸಲು ಹೊರಟಿದ್ದಾರೆ. ಅವರಿಗೆ ಬಡ ಮುಸ್ಲಿಮರ ಏಳಿಗೆ ಬೇಕಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಕೇಸರಿ ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ತಾನು ಹಿಂದೂವಾದಿ ಎಂದು ಬೀಗುತ್ತಿರುವ ಪುತ್ತೂರಿನ ಶಾಸಕರ ನಕಲಿ ಮುಖವಾಡ ಕಳಚಿ ಬಿದ್ದಿದೆ. ದೇವಸ್ಥಾನಗಳ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ತಕರಾರಿಲ್ಲ. ಆದರೆ ವಕ್ಫ್ ನ ಹಳೆಯ ಕಾಯ್ದೆ ಅದೆಷ್ಟೋ ಹಿಂದೂಗಳ ಮನೆ, ಹೊಲ, ದೇವಸ್ಥಾನ ಸ್ಥಳಗಳ ಮೇಲೆ ಕ್ಲೇಮ್ ಮಾಡಲು ಹೊರಟಿತ್ತು. ಅದೆಷ್ಟೋ ಹಿಂದೂ ದೇವಸ್ಥಾನಗಳು ಇದರಿಂದ ಪ್ರಭಾವಕ್ಕೆ ಒಳಗಾಗಿದ್ದವು ಎಂಬುದು ಪುತ್ತೂರಿನ ಶಾಸಕರಿಗೆ ತಿಳಿದಿದೆಯೇ, ಚುನಾವಣೆ ಸಂದರ್ಭದಲ್ಲಿ ಹಿಂದೂಗಳ ಹಿತ ಕಾಯಲು ನಾನು ಸದಾ ಸಿದ್ಧ ಎಂದು ಹೇಳಿರುವ ಶಾಸಕರು ತುಷ್ಠೀಕರಣಕ್ಕಾಗಿ ಹಿಂದೂಗಳಿಗೆ ಮಾರಕವಾಗಿ ಪರಿಣಮಿಸಿದ್ಧ ಹಳೆ ವಕ್ಫ್ ಕಾನೂನನ್ನು ಸಮರ್ಥಿಸಿ ಮಾತನಾಡುತ್ತಾರೆ ಎಂದರೆ ಅವರ ಗೋಮುಖ ವ್ಯಾಘ್ರತನ ಕಾಣಿಸುತ್ತಿದೆ. ದೇವಸ್ಥಾನ ಹಾಗೂ ಬ್ರಹ್ಮಕಲಶಗಳಿಗೆ ಹೋಗಿ ಬಂದ ಮಾತ್ರಕ್ಕೆ ಹಿಂದುತ್ವ ಅಲ್ಲಾ ಶಾಸಕರೆ ಎಂದು ತಿಳಿಸಿದ ಅವರು, ಹಿಂದೂಗಳ ಶ್ರದ್ಧಾ ಕೇಂದ್ರ, ಗೋವಿನ ಹತ್ಯೆ ನಡೆದಾಗ, ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ, ಹಿಂದೂ ಕಾರ್ಯಕರ್ತರನ್ನು ನಿಮ್ಮದೇ ಕಾಂಗ್ರೆಸ್ ಸರಕಾರ ಗಡಿಪಾರು ಮಾಡಿದಾಗ ಎಲ್ಲಿ ಅಡಗಿ ಕುಳಿತಿದ್ರಿ ಶಾಸಕರೇ ಎಂದು ಪ್ರಶ್ನಿಸಿದರು. ಇದೀಗ ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆ ನೆಪದಲ್ಲಿ ಪೂರ್ವ ನಿಯೋಜಿತ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ, ನೇಮೋತ್ಸವಗಳಿಗೆ ಶುಭ ಕೋರಿ ಹಾಕಲಾಗಿರುವ ಬ್ಯಾನರ್, ಬಂಟಿಂಗ್ಸ್ ಗಳನ್ನು ನಿಮ್ಮ ಸರಕಾರವೇ ತೆಗೆಯುತ್ತಿದ್ದರೆ ನೀವು ಯಾಕೆ ತುಟಿ ಪಿಟಿಕ್ ಅನ್ನುತ್ತಿಲ್ಲ ಎಂದು ಪ್ರಶ್ನಿಸಿದರು.
ವಕ್ಫ್ ಆಸ್ತಿಯ ಸುಮಾರು ಹತ್ತು ಲಕ್ಷ ಕೋಟಿಗೂ ಅಧಿಕ. ಆದಾಯ ಮಾತ್ರ 163 ಕೋಟಿ ಅಂದಾಗ ಇದರಿಂದ ಬಡ ಮುಸಲ್ಮಾನರಿಗೇ ವಂಚನೆ ಆಗಿದೆ ಎಂಬ ಗುಮಾನಿ ನಿಮಗೆ ಅನಿಸಿಲ್ಲವೇ, ಅದರಿಂದ ನಿಮಗೆ ಪಾಲು ಬಂದಿದೆಯೇ ಎಂದು ಪ್ರಶ್ನಿಸಿದರು.
ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್ ಮುಸಲ್ಮಾರ ಮಧ್ಯದಲ್ಲಿ ಸುಳ್ಳು ವದಂತಿಗಳನ್ನು ಹರಡುವ ಮೂಲಕ ಅವರನ್ನು ಎತ್ತಿಕಟ್ಟಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವುದು ಕೈ ಮುಖಂಡ ಹೇಳಿಕೆಯಿಂದ ವೇದ್ಯವಾಗುತ್ತದೆ. ನಿಮ್ಮ ಈ ಕಾರ್ಯಕ್ಕೆ ಹೈಕೋರ್ಟ್ ಕೂಡಾ ಛೀಮಾರಿ ಹಾಕಿದೆ. ಆದ್ದರಿಂದ ಜಿಲ್ಲಾಡಳಿತ ಕಾಂಗ್ರೆಸ್ ಒತ್ತಡಗಳಿಂದ ಮೇಲೆದ್ದು ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯನ್ನು ಕಾಪಾಡುವ ಹೊಣೆಯನ್ನು ಅರಿತು ಈ ಅನಾವಶ್ಯಕ ಕಾರ್ಯಕ್ರಮಕ್ಕಾಗಿ ಇಡೀ ಜಿಲ್ಲೆಯ ಜನರ ಜೀವನ ಅಸ್ತವ್ಯಸ್ಥಗೊಳಿಸುವ ಬದಲು ಸೂಕ್ತ ರೀತಿಯ ನಿರ್ಬಂಧಗಳನ್ನು ಹೊರಿಸಿ ನಿಗ್ರಹಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬಿಜೆಪಿ ಮಾಧ್ಯಮ ವಕ್ತಾದ ಮಹೇಶ್ ಕೇರಿ ಉಪಸಸ್ಥಿತರಿದ್ದರು.