ಬೆಂಗಳೂರು: ಪಿಯುಸಿ ಆಯಿತು ಇನ್ನು ಎಸ್‌ಎಸ್‌ಎಲ್‌ಸಿ ರಿಸಲ್ಟ್ ನಿರೀಕ್ಷೆಯಲ್ಲಿ ಮಕ್ಕಳಿದ್ದಾರೆ. ಮುಂದಿನ ತಿಂಗಳು ಮೊದಲ ವಾರದಲ್ಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಪ್ರಾರಂಭವಾಗಿ ಏಪ್ರಿಲ್ 4ರವರೆಗೆ ನಡೆದಿವೆ. ಏಪ್ರಿಲ್ 15ರಿಂದ ರಾಜ್ಯಾದ್ಯಂತ 240ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭವಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆ-1 ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗರಾಪ್ಪ ಹೇಳಿದ್ದಾರೆ. ಈಗಾಗಲೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ಆರಂಭವಾಗಿದೆ. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ- 1 ನಡೆದಿದ್ದು, 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಎಸ್‌ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದು. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಮರುಪರಿಶೀಲನೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಮಂಡಳಿಯ ಅರ್ಜಿ ನಮೂನೆಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೋಡ್‌ನಲ್ಲಿ ಅಗತ್ಯ ಶುಲ್ಕದೊಂದಿಗೆ ಸಲ್ಲಿಸಬೇಕು.
ಒಂದನೇ ತರಗತಿ ಸೇರ್ಪಡೆ ವಯೋಮಿತಿ 5.5 ವರ್ಷ
ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗ ಸಲ್ಲಿಸಿದ್ದು, ಈ ಕುರಿತು ಶಾಲಾ ಶಿಕ್ಷಣ ಇಲಾಖೆ ನಿರ್ಧಾರ ಪ್ರಕಟಿಸಿದೆ. ಎಲ್ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ. ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 6 ವರ್ಷ ಆಗಿರಬೇಕು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.