ಒಕ್ಕಲಿಗ, ಲಿಂಗಾಯತ ಸಚಿವರಿಂದ ಭಾರಿ ವಿರೋಧ; ಜೋರು ಧ್ವನಿಯಲ್ಲಿ ವಾಗ್ವಾದ
ಬೆಂಗಳೂರು : ಜಾತಿ ಗಣತಿ ವರದಿ ಸಂಬಂಧ ನಿನ್ನೆ ನಡೆದ ಮಹತ್ವದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವ ತೀರ್ಮಾನವನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ. ಸಚಿವರು ವರದಿ ಪರ ಮತ್ತು ವಿರೋಧವಾಗಿ ಜೋರು ದ್ವನಿಯಲ್ಲಿ ಮಾತನಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯಾವ ಸಮಜಾಯಿಸಿಗೂ ಬಗ್ಗಿಲ್ಲ ಎಂದು ತಿಳಿದುಬಂದಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಚಿವರು ವರದಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಕಳೆದೊಂದು ವಾರದಿಂದ ಕರ್ನಾಟಕದಾದ್ಯಂತ ದೊಡ್ಡ ಕೋಲಾಹಲ ಎಬ್ಬಿಸಿದ್ದ ಜಾತಿ ಗಣತಿ ವರದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ಸಚಿವರು ಜೋರಾದ ದನಿಯಲ್ಲಿ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತಿ ವರ್ಗೀಕರಣ ವಿಷಯ ಸಂಬಂಧ ಡಿ.ಕೆ ಶಿವಕುಮಾರ್ ಜೋರಾದ ದನಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲೂ ಬಡವರಿಲ್ಲವೇ ಎಂದು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.
ಕೆಲವು ನಿಗದಿತ ಜಾತಿಗಳನ್ನು ಮಾತ್ರ ಕೆಟಗರಿ 1ಕ್ಕೆ ಸೇರ್ಪಡೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿ.ಕೆ ಶಿವಕುಮಾರ್, ಒಕ್ಕಲಿಗರಲ್ಲಿ ಬಡವರಿಲ್ವಾ? ಲಿಂಗಾಯತರಲ್ಲಿ ಬಡವರಿಲ್ವಾ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಡಿ.ಕೆ ಶಿವಕುಮಾರ್ ಮಾತಿಗೆ ಲಿಂಗಾಯತ ಸಚಿವರು ದನಿಗೂಡಿಸಿ ನಮ್ಮವರೂ ಕೇವಲ ಒಂದೇ ದನ ಕಟ್ಟಿಕೊಂಡು ಜೀವನ ನಡೆಸುವವರಿದ್ದಾರೆ, ಅವರೆಲ್ಲ ಶ್ರೀಮಂತರಲ್ಲ ಎಂದಿದ್ದಾರೆ.
ಈ ವರದಿಯೇ ಸರಿಯಿಲ್ಲ, ನಮ್ಮ ಸಮುದಾಯದ ಉಪಪಂಗಡಗಳನ್ನು ವಿಭಜಿಸಲಾಗಿದೆ. ಲಿಂಗಾಯತ, ಉಪಪಂಗಡ ವಿಂಗಡಿಸಿ ನಮೂದಿಸಿರುವುದು ತಪ್ಪು ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಆಕ್ಷೇಪ ವ್ಯಕ್ತಪಡಿಸಿ ವರದಿಯನ್ನು ಒಪ್ಪುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಮಲ್ಲಿಕಾರ್ಜುನ ಮಾತಿಗೆ ದನಿಗೂಡಿಸಿದ ಸಚಿವ ಈಶ್ವರ ಖಂಡ್ರೆ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಯನ ವರದಿಯನ್ನು ಸಂಪುಟ ಸಭೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಬಗ್ಗೆಯೂ ಪ್ರಸ್ತಾಪವಾಯಿತು. 2018ರಲ್ಲಿ ಪ್ರತ್ಯೇಕ ಧರ್ಮ ವಿಚಾರ ಪ್ರಸ್ತಾಪಿಸಿ ಕೈಸುಟ್ಟುಕೊಂಡಿದ್ದೆವು. ಈಗ ಮತ್ತೆ ಅದೇ ರೀತಿಯಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಜಾತಿ ಗಣತಿ ತೀರ್ಮಾನಿಸುವ ಮೊದಲು ಯೋಚಿಸಿ ಎಂದು ಶಿವಾನಂದ ಪಾಟೀಲ್ ಹೇಳಿದರು.
ಇದಕ್ಕೆ ಸಚಿವ ಎಂ.ಬಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿ ಆ ವಿಷಯಕ್ಕೂ ಇದಕ್ಕೂ ಏನು ಸಂಬಂಧವೆಂದು ಎಂಬಿ ಪ್ರಶ್ನಿಸಿದರು. ಲಿಂಗಾಯತ ಧರ್ಮ ವಿಚಾರ ಬೇರೆ, ಜಾತಿ ಗಣತಿಯೇ ಬೇರೆ. ಒಂದಕ್ಕೊಂದು ಸಂಬಂಧ ಇಲ್ಲದೆ ಇರುವುದನ್ನು ಮಾತಾಡಬಾರದು ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಆ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದರು.
ದಲಿತ ಸಮುದಾಯದ ಸಚಿವರು, ಜಾತಿ ಗಣತಿ ಕಾಂಗ್ರೆಸ್ ಪಣಾಳಿಕೆಯಲ್ಲೇ ಇದೆ, ಅದು ನಮ್ಮ ಪಾಲಿಸಿ, ಜಾತಿಗಣತಿಯಿಂದ ಹಿಂದೆ ಸರಿಯುವುದು ಬೇಡ ಎಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಿಂಗಾಯತ ಸಮುದಾಯದವ ಸಚಿವರು ಹಾಗೂ ಒಕ್ಕಲಿಗರ ಸಮುದಾಯದ ಸಚಿವರು ಏರು ಧ್ವನಿಯಲ್ಲಿ ವಿರೋಧಿಸಿದರು. ಒಟ್ಟಾರೆ ಸಭೆ ಗೊಂದಲದಲ್ಲೇ ಮುಕ್ತಾಯವಾಗಿದೆ.