ಶಿವಮೊಗ್ಗ, ಬೀದರ್‌ನಲ್ಲಿ ನಡೆದ ಘಟನೆಗೆ ಕೆರಳಿದ ಬ್ರಾಹ್ಮಣ ಸಂಘಟನೆಗಳು
ಬೆಂಗಳೂರು: ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ಸಮುದಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಸಂಭವಿಸಿದ್ದು, ಇದಕ್ಕೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಓರ್ವ ವಿದ್ಯಾರ್ಥಿ ಜನಿವಾರ ತೆಗೆಯುವುದಿಲ್ಲ ಎಂದು ಹೇಳಿದಾಗ ಅಧಿಕಾರಿಗಳು ಜನಿವಾರ ಕಿತ್ತು ತೆಗೆದು ಕಸದಬುಟ್ಟಿಗೆ ಎಸೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಜನಿವಾರ ಬಿಚ್ಚಿದ ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪರೀಕ್ಷಾ ಸಿಬ್ಬಂದಿ ವರ್ತನೆಗೆ ಬ್ರಾಹ್ಮಣ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ವರದಿ ಪಡೆಯುವುದಾಗಿ ಕೆಇಎ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸಿಇಟಿ ಪರೀಕ್ಷೆಗಾಗಿ ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ ಸಿಇಟಿ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಕಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ತೆಗೆಸಿ ಹಾಕಿರುವುದು ಮಕ್ಕಳ ಪೋಷಕರಿಂದ ತಿಳಿದು ಬಂದಿದೆ. ಈ ಕೇಂದ್ರದಲ್ಲಿ ಈ ರೀತಿ ಗಾಯತ್ರಿ ಮಂತ್ರ ದೀಕ್ಷೆ ಪಡೆದು ಅಕ್ಕ ಸಾಕ್ಷರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿದ ಅವಮಾನಕಾರಿ ಘಟನೆ ಅಧಿಕಾರಿಗಳು ಮಾಡಿದ್ದು ಖಂಡನೀಯ ಎಂದು ಬ್ರಾಹ್ಮಣ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ.
ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ವಿಶ್ವಕರ್ಮ ಸಂಘಟನೆ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
ಜಿಲ್ಲಾಧಿಕಾರಿಗಳು ತಕ್ಷಣ ತನಿಖೆ ನಡೆಸಿ ಹಿಂದೂ ಪರಂಪರೆಯ ಸಂಸ್ಕಾರವಾದ ಗಾಯತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯ, ಘನತೆ ಗೌರವ ಗೊತ್ತಿಲ್ಲದ ಧರ್ಮ ವಿರೋದಿ ಕೃತ್ಯ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿವೆ.
ಹಲವು ಹಿಂದು ಸಂಘಟನೆಗಳು ಕೂಡ ಜನಿವಾರ ಬಿಚ್ಚಿಸಿದ ಕ್ರಮವನ್ನು ಖಂಡಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಬುರ್ಖಾ ಧರಿಸುವವರಿಗೆ ಇರುವ ಸ್ವಾತಂತ್ರ್ಯ ಈ ರಾಜ್ಯದಲ್ಲಿ ಜನಿವಾರ ಧರಿಸುವವರಿಗೆ ಇಲ್ಲ. ಬುರ್ಖಾದಲ್ಲಿ ಅಪಾಯ ಕಾಣಿಸದ ಸರಕಾರಕ್ಕೆ ಜನಿವಾರ ಅಪಾಯಕಾರಿಯಾಗಿ ಕಂಡಿರುವುದು ಹಿಂದು ವಿರೋಧಿ ಮನಸ್ಥಿತಿಯ ಪರಾಕಾಷ್ಠೆ ಎಂದು ಸಂಘಟನೆಗಳು ಆರೋಪಿಸಿವೆ.