ಪೊಲೀಸರಿಂದ ಸರ್ಪಗಾವಲು; ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ
ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಇಂದು ಮುಸ್ಲಿಮರ ಬೃಹತ್ ಪ್ರತಿಭಟನೆ ನಡೆಯಲಿದೆ. ಕರ್ನಾಟಕದಲ್ಲೇ ಅತಿದೊಡ್ಡ ಪ್ರತಿಭಟನೆಗೆ ಉಲೇಮಾ ಸಮನ್ವಯ ಸಮಿತಿ ಕರೆ ನೀಡಿದೆ. ನಗರದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಝಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.
ಈ ಸಮಾವೇಶದಲ್ಲಿ ಇಸ್ಲಾಂ ಧರ್ಮಗುರುಗಳು, ಧಾರ್ಮಿಕ ಮುಖಂಡರು, ಉಲೇಮಾಗಳು ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಮುಸ್ಲಿಮರನ್ನು ಕಡ್ಡಾಯ ಭಾಗಿಯಾಗಲು ಎಲ್ಲ ಮಸೀದಿ ಜಮಾತ್‌ಗಳಿಂದ ಕರೆ ನೀಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಪ್ರತಿಭಟನಾ ಸಭೆ ಹಿನ್ನೆಲೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದು ಎರಡು ಸಾವಿರಕ್ಕೂ ಅಧಿಕ ಪೊಲೀಸರು, ಅರೆಸೇನಾ ಪಡೆಯಿಂದ ಭದ್ರತೆ ಕಲ್ಪಿಸಲಾಗಿದೆ.
ಬೈಕ್ ರ್ಯಾಲಿ, ಯಾವುದೇ ಸಂಘಟನೆಯ ಬಾವುಟ, ಹಸಿರು ಬಾವುಟ ಪ್ರದರ್ಶನಕ್ಕೆ ಅವಕಾಶವಿಲ್ಲ. ರಾಷ್ಟ್ರಧ್ವಜ ಕಟ್ಟಿಕೊಂಡು ಬರುವ ವಾಹನಗಳಿಗೆ ಮಾತ್ರ ಪ್ರವೇಶವಿದೆ. ವಾಹನ ಸಂಚಾರ ವ್ಯತ್ಯವಾಗುವ ಸಾಧ್ಯತೆಯಿರುವುದರಿಂದ ಪಂಪ್‌ವೆಲ್ ಮತ್ತು ಬಿ.ಸಿ.ರೋಡ್‌ನಿಂದ ಸಮಾವೇಶ ಸ್ಥಳಕ್ಕೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಿಗುಭದ್ರತೆ
ಪ್ರತಿಭಟನೆಗೆ ಪೊಲೀಸರು ಬಿಗು ಭದ್ರತೆಯ ಏರ್ಪಾಡು ಮಾಡಿದ್ದಾರೆ. ಗುರುವಾರ ಸಂಜೆಯಿಂದಲೇ ಸಮಾವೇಶ ಸ್ಥಳದ ಸುತ್ತಮುತ್ತ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಮಧ್ಯಾಹ್ನ 12ರಿಂದ ರಾತ್ರಿ 9 ಗಂಟೆಯ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಪೊಲೀಸರು ಸೂಚಿಸಿದ್ದಾರೆ.
ಬಂಟಿಂಗ್ಸ್ ತೆರವಿಗೆ ಆಕ್ರೋಶ
ಸಮಾವೇಶ ನಡೆಯುವ ಸ್ಥಳದ ಸುತ್ತಮುತ್ತ ಸ್ಥಳೀಯ ದೇವಸ್ಥಾನ, ದೈವಸ್ಥಾನಗಳಲ್ಲಿ ನಡೆಯುವ ಜಾತ್ರೆ, ನೇಮಗಳಿಗೆ ಶುಭಕೋರಿ ಹಾಕಿದ್ದ ಫ್ಲೆಕ್ಸ್, ಕೇಸರಿ ಬಂಟಿಂಗ್ಸ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ಮತ್ತು ಹಲವು ಮುಖಂಡರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.