ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಕಳೆದ ಎಂಟು ದಿನಗಳಿಂದ ವೈಭವದಿಂದ ನಡೆಯುತ್ತಿದ್ದು, ಇಂದು ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ.
ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು, ಬಳಿಕ ಶ್ರೀ ದೇವರು ರಥಬೀದಿಗೆ ಬರುವರು. ಆನಂತರ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾಗುವರು. ಈ ಹೊತ್ತಿನಲ್ಲಿ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆದ ಬಳಿಕ ಸಾವಿರಾರು ಭಕ್ತಾದಿಗಳ ಕೈಗಳ ಜಯಘೋಷಗಳೊಂದಿಗೆ ಬ್ರಹ್ಮರಥವನ್ನು ಎಳೆಯುತ್ತಾರೆ. ಲಕ್ಷಾಂತರ ಭಕ್ತಾದಿಗಳು ಬ್ರಹ್ಮರಥೋತ್ಸವವನ್ನು ಕಂಡು ಪುನೀತರಾಗುತ್ತಾರೆ.
ವೈಭವದ ಬ್ರಹ್ಮರಥೋತ್ಸವ ನಡೆದ ಬಳಿಕ ಶ್ರೀ ದೇವರು ಬಂಗರ್ ಕಾಯರ್ ಮಾರ್ ಕಟ್ಟೆಗೆ ತೆರಳುವರು. ಬಳಿಕ ಅಲ್ಲಿಂದ ಮಧ್ಯರಾತ್ರಿ ವೇಳೆ ಶ್ರೀ ದೇವಸ್ಥಾನಕ್ಕೆ ಪುನಃ ಆಗಮಿಸುವರು. ಮರುದಿನ ಅವಭೃತ ಸವಾರಿ.