ಶಾಲೆ ದಾಖಲಾತಿಗಾಗಿ ಹೊಸ ನಿಯಮ ರಚಿಸಿದ ಶಿಕ್ಷಣ ಇಲಾಖೆ
ಬೆಂಗಳೂರು: ಈಗ ಶಾಲೆ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶಾತಿ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲೇ ಖಾಸಗಿ ಶಾಲೆಗಳ ದಾಖಲಾತಿಗಾಗಿ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿ ಮೊದಲಿದ್ದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದೆ.
ದಾಖಲಾತಿ ಹೆಸರಲ್ಲಿ ಮಕ್ಕಳು, ಪೋಷಕರಿಗೆ ಕಿರುಕುಳ ಕೊಡುವುದು, ಮಕ್ಕಳ ದಾಖಲಾತಿಗೆ ಪೋಷಕರಿಗೆ ಪರೀಕ್ಷೆ ಇಡುವುದು ಹಾಗೂ ದುಬಾರಿ ಶುಲ್ಕ ವಸೂಲು ಮಾಡುವುದು ಇತ್ಯಾದಿಗಳಿಗೆ ಕಡಿವಾಣ ಹಾಕಲಾಗಿದೆ. ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ ಪೋಷಕರಿಗೆ ಸಂದರ್ಶನ ಮಾಡುವಂತಿಲ್ಲ. ಮನಸೋ ಇಚ್ಛೆ ಶುಲ್ಕ ನಿಗದಿ ಮಾಡುವಂತಿಲ್ಲ. ಶುಲ್ಕ ನಿಗದಿ ಮಾಡುವುದಕ್ಕೆ ಹೊಸ ನಿಯಮ ಮಾಡಿದ್ದು, ಕಡ್ಡಾಯವಾಗಿ ಖಾಸಗಿ ಶಾಲೆಗಳು ನಿಯಮವನ್ನು ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದೆ.
ಶಾಲೆಗಳು ಶುಲ್ಕದ ವಿವರವನ್ನು ಕಡ್ಡಾಯವಾಗಿ ನೋಟಿಸ್, ಶಾಲಾ ಜಾಲತಾಣ, ಎಸ್‌ಎಟಿಎಸ್‌ನಲ್ಲಿ ಪ್ರಕಟಿಸಬೇಕು, ಶುಲ್ಕದ ಸಂಪೂರ್ಣ ಮಾಹಿತಿಯನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಮುದ್ರಿಸಬೇಕು, ಶಾಲಾ ಆಡಳಿತ ಮಂಡಳಿ ನಿಗದಿಪಡಿಸಿದ ಶುಲ್ಕವನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಅಥವಾ ಪೋಷಕರಿಂದ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ, ಖಾಸಗಿ ಶಾಲೆಗಳು ಕಡ್ಡಾಯವಾಗಿ ಶೇ.25 ಆರ್‌ಟಿಇ ಸೀಟು ಮೀಸಲಿಡಬೇಕು, ಎಸ್‌ಸಿ-ಎಸ್‌ಟಿ ವರ್ಗದ ಆಡಳಿತ ಮಂಡಳಿಯ ಶಾಲೆಗಳಲ್ಲಿ ಕಡ್ಡಾಯ ಶೇ.50 ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳು ಇರಬೇಕು, ಸಹಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಮೀಸಲಾತಿ ಅನ್ವಯ ಶೇ.50 ಸೀಟುಗಳನ್ನು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು ಎಂಬಿತ್ಯಾದಿ ನಿಯಮಗಳನ್ನು ರೂಪಿಸಲಾಗಿದೆ.