ಹಿಂದಿನ ವರ್ಷಕ್ಕಿಂತ 9.94 ಕೋ.ರೂ. ಹೆಚ್ಚಳ
ಸುಬ್ರಹ್ಮಣ್ಯ: ರಾಜ್ಯದಲ್ಲೇ ಅತಿಹೆಚ್ಚು ಆದಾಯವಿರುವ ಪುಣ್ಯಕ್ಷೇತ್ರವಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಕಳೆದ ಹಣಕಾಸು ಸಾಲಿನಲ್ಲೂ ಭಾರಿ ಹೆಚ್ಚಳವಾಗಿದೆ. 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂ.ಗೆ ಏರಿಕೆ ಆಗಿದೆ. ಹಿಂದಿನ ವರ್ಷದ ಆದಾಯ 146.01 ಕೋಟಿ ರೂ. ಆಗಿತ್ತು. ಹಿಂದಿನ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಏರಿಕೆ ಆಗಿದೆ. ಆ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.
ವರ್ಷದಿಂದ ವರ್ಷಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಕಳೆದ ವರ್ಷವೂ ಪ್ರಥಮ ಸ್ಥಾನದಲ್ಲಿತ್ತು. ಈ ಭಾರಿ ಕೂಡ ವಾರ್ಷಿಕ ಆದಾಯದಲ್ಲಿ ಏರಿಕೆಯಿಂದಾಗಿ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತನ್ನ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಬರುತ್ತದೆ. ಸುಬ್ರಹ್ಮಣ್ಯ ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ಕರ್ನಾಟಕ ಮತ್ತು ಹೊರರಾಜ್ಯಗಳಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಒಟ್ಟು 155.95 ಕೋಟಿ ರೂ ಆದಾಯವಾಗಿದೆ. ದೇವಸ್ಥಾನದ ಒಟ್ಟು ಖರ್ಚು 79.82 ಕೋಟಿ ರೂ. ಆಗಿದೆ.
ಅತಿಹೆಚ್ಚು ಆದಾಯ ಗಳಿಸುವ ದೇವಾಲಯಗಳ ಪಟ್ಟಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪ್ರಥಮ ಸ್ಥಾನದಲ್ಲಿದ್ದರೆ, ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ. ಈ ದೇವಸ್ಥಾನದ ಆದಾಯ 31 ಕೋಟಿ ರೂ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು 20 ಕೋಟಿ ರೂ.ಗಳ ಆದಾಯದೊಂದಿಗೆ ಮೂರನೇ ಸ್ಥಾನದಲ್ಲಿದೆ.