ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅತ್ಯಂತ ವೈಭವದಿಂದ ನಡೆಯುತ್ತಿದ್ದು, ಜಾತ್ರೋತ್ಸವದ ಅಂಗವಾಗಿ ಬುಧವಾರ ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಕಿರುವಾಳು ಭಂಡಾರ ಆಗಮನವಾಯಿತು. ಲಕ್ಷಾಂತರ ಭಕ್ತಾದಿಗಳು ಈ ಸಂದರ್ಭವನ್ನು ಕಣ್ತುಂಬಿಕೊಂಡರು.

ಸಂಜೆ 6 ಗಂಟೆಗೆ ಸೂಟೆ ಬೆಳಕಿನೊಂದಿಗೆ ಹೊರಟ ಕಿರುವಾಳು ಬರುವ ದಾರಿಯುದ್ದಕ್ಕೂ ಅಲ್ಲಲ್ಲಿ ಸ್ಥಳೀಯರು ಪಾನೀಯ ವ್ಯವಸ್ಥೆಗಳನ್ನು ಮಾಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಮಲ್ಲಿಗೆ ಅರ್ಪಿಸಿದರು.

ರಾತ್ರಿ ಸುಮಾರು 10.30 ಗಂಟೆ ಹೊತ್ತಿಗೆ ಕಿರುವಾಳು ಶ್ರೀ ದೇವಸ್ಥಾನವನ್ನು ತಲುಪಿತು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ದೈವಗಳ ನುಡಿಗಟ್ಟು ನಡೆಯಿತು. ಬಳಿಕ ಬಲಿ ಉತ್ಸವ ನಡೆದು ಶ್ರೀ ದೈವಗಳು ದೇವರ ಸಮೇತ ದೇವಸ್ಥಾನದ ಒಳಾಂಗಣ ಪ್ರವೇಶಿಸಿದರು. ಬಳಿಕ ಸಣ್ಣ ರಥೋತ್ಸವ ನಡೆದು ಕೆರೆ ಆಯನ, ತೆಪ್ಪೋತ್ಸವ ನಡೆಯಿತು.