ಇಫ್ತಾರ್ ಕೂಟಕ್ಕೆ ಕುಡುಕರನ್ನು ಆಹ್ವಾನಿಸಿದ್ದಕ್ಕೆ ಫತ್ವಾ
ಚೆನ್ನೈ: ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿರುವ ತಮಿಳಿನ ಖ್ಯಾತ ಹೀರೊ ವಿಜಯ್ ವಿರುದ್ಧ ಉತ್ತರ ಪ್ರದೇಶದ ಬರೇಲಿಯ ಸುನ್ನಿ ಮುಸ್ಲಿಮ್ ಮಂಡಳಿ ಫತ್ವಾ ಜಾರಿಗೊಳಿಸಿದೆ. ಅಖಿಲ ಭಾರತ ಮುಸ್ಲಿಮ್ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚಶ್ಮೆ ದಾರೂಲ್ ಇಫ್ತಾದ ಮುಖ್ಯ ಮುಫ್ತಿ ಆಗಿರುವ ಮೌಲಾನ ಶಹಾಬುದ್ದೀನ್ ರಝ್ವಿ ಬರೇಲಿ ಅವರು ನಟ ವಿಜಯ್ ವಿರುದ್ಧ ಫತ್ವಾ ಜಾರಿಗೊಳಿಸಿದ್ದಾರೆ.
ರಮ್ಜಾನ್ ಉಪವಾಸ ವ್ರತದ ಸಂದರ್ಭದಲ್ಲಿ ಆಯೋಜಿಸಿದ ಇಫ್ತಾರ್ ಕೂಟಕ್ಕೆ ಮದ್ಯ ಸೇವಿಸುವವರನ್ನು ಮತ್ತು ಜೂಜುಕೋರರನ್ನು ಆಹ್ವಾನಿಸಿ ಇಸ್ಲಾಮ್ ಧರ್ಮಕ್ಕೆ ಅಪಚಾರ ಎಸಗಿರುವುದಕ್ಕಾಗಿ ನಟನ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಅನ್ಯ ಧರ್ಮೀಯನಾಗಿರುವ ವಿಜಯ್ ಮುಸ್ಲಿಮರ ಪವಿತ್ರ ಇಫ್ತಾರ್‌ಗೆ ಅಪಚಾರ ಎಸಗರಿವುದರಿಂದ ಅವರನ್ನು ಮುಸ್ಲಿಂ ವಿರೋಧಿ ಎಂದು ಘೋಷಿಸಲಾಗಿದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.
ಇಫ್ತಾರ್ ಕೂಟಕ್ಕೆ ಮದ್ಯ ಸೇವಿಸುವವರನ್ನು ಜೂಜುಕೋರರನ್ನು ಆಹ್ವಾನಿಸುವುದು ಅನೈತಿಕ. ಅವರು ಉಪವಾಸ ವ್ರತ ಮಾಡಿದವರಲ್ಲ ಮತ್ತು ಇಸ್ಲಾಮ್‌ನ ಮೇಲೆ ನಂಬಿಕೆಯುಳ್ಳವರಲ್ಲ. ಹೀಗಾಗಿ ತಮಿಳುನಾಡಿನ ಜನತೆ ವಿಜಯ್ ಅವರನ್ನು ನಂಬಬಾರದು ಹಾಗೂ ಇಂಥ ಜನರು ಮುಸ್ಲಿಂ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸುವುದಕ್ಕೆ ಅವಕಾಶ ಕೊಡಬಾರದು ಎಂದು ಫತ್ವಾದಲ್ಲಿ ಹೇಳಲಾಗಿದೆ.
ವಿಜಯ್ ಹೀರೊ ಆಗಿ ನಟಿಸಿರುವ ʼದ ಬೀಸ್ಟ್ʼ ಎಂಬ ಸಿನಿಮಾದಲ್ಲಿ ಇಡೀ ಮುಸ್ಲಿಮ್ ಸಮುದಾಯವನ್ನು ಭಯೋತ್ಪಾದಕರ ಹಾಗೆ ಬಿಂಬಿಸಲಾಗಿದೆ. ಚಿತ್ರದಲ್ಲಿ ಮುಸ್ಲಿಮರನ್ನು ಖೂಳರು ಮತ್ತು ರಾಕ್ಷಸರು ಎಂಬಂತೆ ತೋರಿಸಿ ಅವರನ್ನು ಸಂಹರಿಸುವ ಪಾತ್ರವನ್ನು ವಿಜಯ್ ಮಾಡಿದ್ದಾರೆ. ಇಂಥ ವ್ಯಕ್ತಿಯನ್ನು ಮುಸ್ಲಿಮರು ನಂಬಬಾರದು ಎಂದು ಮೌಲಾನ ಶಹಾಬುದ್ದೀನ್ ರಝ್ವಿ ಬರೇಲಿ ಹೇಳಿದ್ದಾರೆ.
ವಿಶೇಷವೆಂದರೆ ಇತ್ತೀಚೆಗಷ್ಟೇ ತಮಿಳುನಾಡಿನ ರಾಜಕೀಯಕ್ಕೆ ಪ್ರವೇಶಿರುವ ವಿಜಯ್ ಮುಸ್ಲಿಮರ ಬೆಂಬಲ ಪಡೆದುಕೊಳ್ಳಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದವರಲ್ಲಿ ಅವರ ಪಕ್ಷವೂ ಇದೆ. ಇದಲ್ಲದೆ ತಾನು ಮುಸ್ಲಿಮರ ಸಂರಕ್ಷಕ ಎಂದು ಅವರು ವಕಾಶ ಸಿಕ್ಕಿದಾಗಲೆಲ್ಲ ತೋರಿಸಿಕೊಡುತ್ತಿದ್ದಾರೆ.