ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಭೀತಿ
ಬೆಂಗಳೂರು: ಡೀಸೆಲ್ ಬೆಲೆ ಏರಿಕೆ ಪ್ರತಿಭಟಿಸಿ ಸೋಮವಾರ ಮಧ್ಯರಾತ್ರಿಯಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರವನ್ನು ಇಂದಿನಿಂದ ಮತ್ತಷ್ಟು ತೀವ್ರರಗೊಳಿಸಲು ತೀವ್ರಗೊಳಿಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಲಾರಿಗಳು ನಿಂತಲ್ಲೇ ನಿಂತಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗುತ್ತಿದ್ದು, ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಅಭಾವದ ಬಿಸಿ ತಟ್ಟಲು ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅನೇಕ ವಸ್ತುಗಳು ದುಬಾರಿಯಾಗುತ್ತಿವೆ.
ಲಾರಿ ಮುಷ್ಕರವನ್ನು ನೆಪವಾಗಿಟ್ಟುಕೊಂಡು ಕಾಳಸಂತೆ ದಂಧೆಕೋರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಭೀತಿ ಕಾಡುತ್ತಿದೆ ಎಂದು ಬೆಂಗಳೂರಿನ ಕೆಲವು ಅಂಗಡಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗೂಡ್ಸ್ ರೈಲು ಮೂಲಕ ಮೈಸೂರಿಗೆ ರಸಗೊಬ್ಬರ, ಸಿಮೆಂಟ್ ಬಂದಿದೆ. ಆದರೆ ಲಾರಿಗಳು ನಿಂತಲ್ಲೇ ನಿಂತಿರುವುದರಿಂದ ಅನ್‌ಲೋಡ್ ಆಗುತ್ತಿಲ್ಲ.
ಇತರ ರಾಜ್ಯಗಳಿಂದ ಲಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಸರಬರಾಜಿಗೆ ಅಡ್ಡಿಯಾಗಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರಿನಲ್ಲಿ 2 ಸಾವಿರ ಲಾರಿಗಳು ಸಂಚಾರ ಬಂದ್ ಮಾಡಿವೆ. ನಿತ್ಯ ಕಾಫಿ, ಮೆಣಸು, ಟಿಂಬರ್ , ಶುಂಠಿ ಎಂದು ಪಾಕಿಸ್ಥಾನದ ಗಡಿವರೆಗೂ ಲಾರಿಗಳು ಸರಕುಗಳನ್ನು ಸಾಗಾಟ ಮಾಡುತ್ತಿದ್ದವು. ಆದರೆ ಈಗ ಮುಷ್ಕರದಿಂದಾಗಿ ವಹಿವಾಟು ಬಂದ್ ಆಗಿದೆ ಎಂದು ಚಿಕ್ಕಮಗಳೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಿವಾನಂದ್ ತಿಳಿಸಿದ್ದಾರೆ.
ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವರು, ರಾಜ್ಯ ಹೆದ್ದಾರಿಯ ಟೋಲ್ ಮಾತ್ರ ತೆಗೆಯಿರಿ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಬಗ್ಗೆ ಮಾಲೀಕರು ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಡೀಸೆಲ್ ದರ ಹೆಚ್ಚಿಸಿದಾಗ ಯಾಕೆ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕರಾವಳಿಗೆ ತಟ್ಟದ ಬಿಸಿ
ಲಾರಿ ಮುಷ್ಕರದ ಬಿಸಿ ಕರಾವಳಿಯ ಉಭಯ ಜಿಲ್ಲೆಗಳಿಗೆ ತಟ್ಟಿಲ್ಲ. ದ ಕ. ಲಾರಿ ಮಾಲೀಕರ ಸಂಘ ಈ ಮುಷ್ಕರವನ್ನು ಬೆಂಬಿಲಿಸಿಲ್ಲ. ಹೀಗಾಗಿ ಕರಾವಳಿಯಲ್ಲಿ ಲಾರಿಗಳು ಓಡಾಡುತ್ತಿವೆ. ತರಕಾರಿ, ಹಣ್ಣುಹಂಪಲು, ಹೂಗಳು ಹೆಚ್ಚಾಗಿ ನಿತ್ಯ ಬಸ್‌ಗಳಲ್ಲಿ ಬರುವುದರಿಂದ ಪೂರೈಕೆಯಲ್ಲಿ ದೊಡ್ಡಮಟ್ಟದ ವ್ಯತ್ಯಾಸವಾಗಿಲ್ಲ. ಆದರೆ ಲಾರಿ ಮುಷ್ಕರ ಇನ್ನಷ್ಟು ದಿನ ಮುಂದುವರಿದರೆ ಕರಾವಳಿಯಲ್ಲೂ ಸರಕು ಸಾಗಾಟ ವ್ಯತ್ಯಯವಾಗಬಹುದು ಎನ್ನಲಾಗಿದೆ.