ಕೋವಿಡ್‌ ನಂತರ ಹೃದಯ ಸ್ತಂಭನ ಶೇ.15 ಏರಿಕೆ

ಅಧ್ಯಯನ ವರದಿಯಲ್ಲಿದೆ ಕಳವಳಕಾರಿ ಮಾಹಿತಿ

ದೆಹಲಿ : ಕಳೆದ ಕೆಲವು ತಿಂಗಳಿಂದ ಜನರು ಹೃದಯಾಘಾತದಿಂದ ಮೃತಪಟ್ಟ ಹಲವು ಪ್ರಕರಣಗಳು ವರದಿಯಾಗಿವೆ. ಆರೋಗ್ಯವಂತರಾಗಿರುವವರು, ಮೈದಾನದಲ್ಲಿ ಆಡುತ್ತಿರುವವರು, ತೀರಾ ಚಿಕ್ಕವಯಸ್ಸಿನವರು ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಸುದ್ದಿಗಳು ಜನರನ್ನು ಕಳವಳಕ್ಕೀಡು ಮಾಡಿವೆ. ಕೋವಿಡ್‌ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡು ಆರೋಗ್ಯವಂತರಾಗಿದ್ದ ವ್ಯಕ್ತಿಗಳಲ್ಲಿ ಹೃದಯಸ್ತಂಭನದಿಂದ ಮರಣ ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.50ರಷ್ಟು ಮಂದಿ ಧೂಮಪಾನದ ಚಟ ಹೊಂದಿರಲಿಲ್ಲ. ಬಹುತೇಕ ಮಂದಿಗೆ ಹೃದಯ ಸಮಸ್ಯೆಯ ಕೌಟುಂಬಿಕ ಹಿನ್ನೆಲೆ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ದಿಲ್ಲಿಯ ಕೆಲವು ಆಸ್ಪತ್ರೆಗಳಲ್ಲಿ ಹೃದಯಸ್ತಂಭನದಿಂದ ಸಾವು ಸಂಭವಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.10ರಿಂದ 15ರವರೆಗೂ ಹೆಚ್ಚಳ ಕಂಡುಬಂದಿದೆ. ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಗಳಲ್ಲಿ ಸಾವು ಹಾಗೂ ಹೃದಯ ಸ್ತಂಭನ, ಪಾರ್ಶ್ವವಾಯು, ಶ್ವಾಸಕೋಶದ ಸಮಸ್ಯೆ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದಲ್ಲಿ ಸಂಶೋಧನಾ ವರದಿ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತಿವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕೋವಿಡ್‌ ಪೂರ್ವದಲ್ಲಿ 50 ವರ್ಷದೊಳಗಿನವರು ಹೃದಯ ಸ್ತಂಭನದಿಂದ ಸಾವಿಗೀಡಾಗುವ ಪ್ರಮಾಣ ಶೇ.15ರಷ್ಟಿತ್ತು. ಆದರೆ ಕೋವಿಡ್‌ ನಂತರ ಶೇ.24ಕ್ಕೆ ಏರಿಕೆಯಾಗಿದೆ. ಇಂತಹ ಸಾವುಗಳಲ್ಲಿ 20 ವರ್ಷ ವಯಸ್ಸಿನವರೂ ಇದ್ದಾರೆ. ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಂದಾಜಿನ ಪ್ರಕಾರ ಕೋವಿಡ್‌ ಬಳಿಕ ಹೃದಯಸ್ತಂಭನ ಪ್ರಕರಣಗಳಲ್ಲಿ ಶೇ.10ರಿಂದ 15ರಷ್ಟುಹೆಚ್ಚಳ ಕಂಡುಬಂದಿದೆ. ಕೋವಿಡ್‌ ಸೋಂಕಿಗೆ ತುತ್ತಾಗಿದ್ದವರು ತಮ್ಮ ವಯಸ್ಸು ಎಷ್ಟೇ ಆಗಿರಲಿ ಅಥವಾ ದೈಹಿಕವಾಗಿ ಎಷ್ಟೇ ಫಿಟ್‌ ಆಗಿರಲಿ ಉಸಿರಾಟ ಸಮಸ್ಯೆಯಂತಹ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ ವಹಿಸಬಾರದು. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹಾಗೆಯೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಏಮ್ಸ್‌ ಪ್ರಾಧ್ಯಾಪಕ ರಾಕೇಶ್‌ ಯಾದವ್‌ ಸಲಹೆ ಮಾಡಿದ್ದಾರೆ.
ಕೋವಿಡ್‌ ಇತಿಹಾಸ ಹೊಂದಿರುವ ಮಧ್ಯವಯಸ್ಕರು ಹಾಗೂ ವಯೋವೃದ್ಧರು ಅಧಿಕ ರಕ್ತದೊತ್ತಡ, ಬೊಜ್ಜು, ಕೊಲೆಸ್ಟ್ರಾಲ್‌ ಮೇಲೆ ನಿಗಾ ಇಡಬೇಕು. ಅಸಾಮಾನ್ಯ ರೀತಿಯಲ್ಲಿ ವಿಪರೀತ ವ್ಯಾಯಾಮ ಮಾಡಬಾರದು. ಏಕೆಂದರೆ, ಇಂತಹ ಕಸರತ್ತಿನ ವೇಳೆಯೇ ಹಲವು ಸಾವುಗಳು ಸಂಭವಿಸಿವೆ ಎಂದು ಪಿಎಸ್‌ಆರ್‌ಐ ಶ್ವಾಸಕೋಶ ಸಂಸ್ಥೆಯ ಡಾ. ಜಿ.ಸಿ.ಖಿಲ್ನಾನಿ ಎಚ್ಚರಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top