ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ
ಮಂಗಳೂರು: ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬಯಿಯಿಂದ ಬಂದಿದ್ದ ಇಬ್ಬರು ಯುವಕರು ಸುರತ್ಕಲ್ ಬೀಚ್‌ನಲ್ಲಿ ನೀರುಪಾಲಾದ ದುರಂತ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಒಬ್ಬನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಒಯ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ನಾಪತ್ತೆಯಾಗಿದ್ದು ತೀವ್ರ ಹುಡುಕಾಟ ನಡೆಯುತ್ತಿದೆ.
ಮೃತ ಯುವಕನನ್ನು ಮುಂಬಯಿಯ ವಿವೇಕ್ ಎಂಬವರ ಪುತ್ರ ಜ್ಞಾನ್ ಬಂಜನ್ (18) ಎಂದು ಗುರುತಿಸಲಾಗಿದೆ. ಮುಂಬಯಿಯ ಉಮೇಶ್ ಎಂಬವರ ಪುತ್ರ ಅನಿಲ್ (16) ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ. ರಾಜ್ಯ ತುರ್ತು ಸ್ಪಂದನ ನಿನ್ನೆ ರಾತ್ರಿಯೇ ಆಗಮಿಸಿ ದಡದಲ್ಲಿ ಹುಡುಕಾಟ ನಡೆಸಿದಾಗ ಪ್ರಯೋಜನವಾಗಿಲ್ಲ. ಇಂದು ಮತ್ತೆ ಹುಡುಕಾಟ ಮುಂದುವರಿದಿದೆ.
ಸುರತ್ಕಲ್ ಸಮೀಪ ಪುಚ್ಚಾಡಿ ಪೊರಿಕ್ಕಾನ ಎಂಬಲ್ಲಿ ಉಮೇಶ್ ಅವರ ತಾಯಿ ಮನೆಯಿದ್ದು, ಅಲ್ಲಿಯೇ ಶನಿವಾರ ಅವರ ಮಗಳ ವಿವಾಹದ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಇಂದು ಮೂಡುಬಿದಿರೆಯಲ್ಲಿ ಮದುವೆ ನೆರವೇರಬೇಕಿತ್ತು. ಮಂಗಳವಾರ ಸಂಬಂಧಿಕರೆಲ್ಲ ಸೇರಿ ಹತ್ತು ಮಂದಿ ಸುರತ್ಕಲ್ ಕಡಲ ತೀರಕ್ಕೆ ಹೋಗಿದ್ದರು. ಸಂಜೆಯವರೆಗೂ ಬೀಚ್‌ನಲ್ಲಿ ಆಟವಾಡಿ ಹಿಂದಿರುಗಲು ಅಣಿಯಾಗುತ್ತಿದ್ದಾಗ ಈ ಇಬ್ಬರು ಯುವಕರು ಕೊನೆಯ ಬಾರಿ ಈಜಿ ಬರೋಣ ಎಂದು ಮತ್ತೆ ಸಮುದ್ರಕ್ಕಿಳಿದಿದ್ದಾರೆ. ಈ ಸಂದರ್ಭ ಬಲವಾದ ಅಲೆ ಅಪ್ಪಳಿಸಿ ಸಮುದ್ರಪಾಲಾಗಿದ್ದಾರೆ. ಕೂಡಲೇ ಜ್ಞಾನ್‌ನನ್ನು ಸಂಬಂಧಿಕರು ಮತ್ತು ದಡದಲ್ಲಿದ್ದವರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅನಿಲ್ ನಾಪತ್ತೆಯಾಗಿದ್ದಾರೆ. ಆಸ್ಪತ್ರೆಯಲ್ಲಿ ಜ್ಞಾನ್ ಕೊನೆಯುಸಿರೆಳೆದಿದ್ದಾರೆ.