ಪುತ್ತೂರು: ದಕ್ಷಿಣ ಕನ್ನಡದ ಅತಿದೊಡ್ಡ ಚಿನ್ನದ ಮಳಿಗೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯು ವಿಸ್ತರಿತ ನವೀಕೃತ ಮಳಿಗೆಯಲ್ಲಿ ಪುನರಾರಂಭಗೊಳ್ಳುತ್ತಿದೆ. ಇದರ ಲೋಕಾರ್ಪಣೆ ಮತ್ತು ಮುಳಿಯ ಆರಂಭೋತ್ಸವ ಏ.20 ಭಾನುವಾರ ಚಾಲನೆಗೊಳ್ಳಲಿದೆ ಎಂದು ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ.
ಮಂಗಳವಾರ ಮುಳಿಯ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳಿಯ ಸಂಸ್ಥೆಯ ಬ್ರ್ಯಾಂಡ್ ಅಂಬಾಸೀಡರ್ ಆಗಿರುವ ಚಿತ್ರನಟ ರಮೇಶ್ ಅರವಿಂದ್ ಅವರು ಮುಳಿಯ ಆರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಅಂದು ಬೆಳಗ್ಗೆ 9.30 ಕ್ಕೆ ರಮೇಶ್ ಅರವಿಂದ್ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರನ್ನು ಮೆರವಣಿಗೆಯಲ್ಲಿ ಕೋರ್ಟ್ ರಸ್ತೆಯ ಸುಲೋಚನಾ ಟವರ್ಸ್‌ನಲ್ಲಿರುವ ಮುಳಿಯ ಸಂಸ್ಥೆಗೆ ಕರೆತರಲಾಗುತ್ತದೆ. ಮೆರವಣಿಗೆಯಲ್ಲಿ ದೇವರ ದೀಪ ತರಲಾಗುತ್ತದೆ. ಸಂಸ್ಥೆಯ ಅಪರಂಜಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ದೀಪಪ್ರಜ್ವಲನೆ ಮಾಡಿ, ಏ.20 ರಿಂದ ಮೇ 13 ರ ವರೆಗೆ ನಡೆಯುವ ಮುಳಿಯ ಆರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಆರಂಭೋತ್ಸವದ ಪ್ರಯುಕ್ತ ಮುಂದಿನ ಒಂದು ತಿಂಗಳ ಕಾಲ ಅಪರಂಜಿ ಸಭಾಂಗಣದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಏ.22 ರಂದು ಸಂಜೆ ಗಿರಿಜಾ ಕಲ್ಯಾಣ ಯಕ್ಷಗಾನ, 24 ರಂದು ಸಂಗೀತ ರಸಸಂಜೆ, 25 ರಂದು ಅಕ್ಷಯ ತೃತೀಯ ಮಹತ್ವದ ಕುರಿತು ವಿಶೇಷ ಸಂವಾದ, ಮೇ 1ರಂದು ಸ್ವಚ್ಛ ಪುತ್ತೂರು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಮೇ 4ರಂದು ಪ್ರಶ್ನೋತ್ತರ ಮತ್ತು ಗೇಮಿಂಗ್, ಮೇ 5ರಂದು ಶ್ರೀರಾಮ ಪುನರಾಗಮನ ನೃತ್ಯರೂಪಕ, ಮೇ 6ರಂದು ಸಂಜೆ ಕುಂಕುಮಾರ್ಚನೆ ಎಂಬ ವಿಶಿಷ್ಟ ಕಾರ್ಯಕ್ರಮ, ಮೇ 9 ರಂದು ಸಂಜೆ 7 ಗಂಟೆಗೆ ಪುದರ್ ದೀತ್‌ಜಿ ತುಳು ನಾಟಕ, ಮೇ 11ರಂದು ಬೆಳಗ್ಗೆ 11 ಗಂಟೆಗೆ ಕೃಷಿ ವಿಚಾರಗೋಷ್ಠಿ, ಮೇ 13ರಂದು ಸಂಜೆ 5 ಗಂಟೆಗೆ ಗೊಂಬೆಯಾಟ ಪ್ರದರ್ಶನ ನಡೆಯಲಿದೆ ಎಂದರು.
ವಿಶಾಲ ವಿಸ್ತರಿತ ಮಳಿಗೆ:
10 ಸಾವಿರ ಚದರ ಅಡಿ ವಿಸ್ತೀರ್ಣದ ವಿಶಾಲ ವಿಸ್ತರಿತ ಮಳಿಗೆ ಲೋಕಾರ್ಪಣೆಗೊಳ್ಳುತ್ತಿದೆ. ಇದರಲ್ಲಿ ಬೆಳ್ಳಿ, ಚಿನ್ನ ಮತ್ತು ವಜ್ರಾಭರಣಗಳ ಪ್ರತ್ಯೇಕ ಕೌಂಟರ್‌ಗಳಿವೆ. ಮಕ್ಕಳ ಆಟೋಟ ಕೊಠಡಿ, ಶಿಶು ಆರೈಕೆ ಕೊಠಡಿ, ವಾಚ್ ಸೆಂಟರ್, ಶೌಚಾಲಯ, ವ್ಯಾಲೆಟ್ ಪಾರ್ಕಿಂಗ್, ದೇಶದಲ್ಲೇ ಪ್ರಥಮ ಬಾರಿಗೆ ಎನ್ನಬಹುದಾದ ಗೋಲ್ಡ್ ಪ್ಯೂರಿಟಿ ಅನಲೈಸರ್, ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಶನ್ ಇದೆ. ಮಧ್ಯಾಹ್ನ ಗ್ರಾಹಕರಿಗೆ ಭೋಜನ ವ್ಯವಸ್ಥೆ, ಸಂಜೆ ಉಪಾಹಾರ ವ್ಯವಸ್ಥೆ ಇದೆ. ಬೆಳ್ಳಿಯ ದೈವಾಭರಣ ಮತ್ತು ದೇವರ ಆಭರಣಗಳನ್ನು ಕೇವಲ ತಯಾರಿಕಾ ವೆಚ್ಚದಲ್ಲಿ (ಲಾಭ ರಹಿತ) ನೀಡಲಾಗುತ್ತದೆ ಎಂದರು. ಕೇಶವ ಪ್ರಸಾದ್ ಮುಳಿಯ, ಕೃಷ್ಣ ಪ್ರಸಾದ್ ಮಾತನಾಡಿ, 81 ವರ್ಷಗಳ ಇತಿಹಾಸವಿರುವ ಮುಳಿಯ ಸಂಸ್ಥೆಯು 3ನೇ ತಲೆಮಾರಿನಲ್ಲಿ ಮುನ್ನಡೆಯುತ್ತಿದೆ. ಮುಳಿಯ ಕೇಶವ ಭಟ್ ಆಂಡ್ ಸನ್ಸ್ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಸಂಸ್ಥೆಯುನ್ನು 2012 ರಿಂದ ಮುಳಿಯ ಜುವೆಲ್ಸ್ ಎಂದು ಬದಲಾಯಿಸಿ ಹೊಸ ಬ್ರ್ಯಾಂಡ್ ಸೃಷ್ಟಿಸಲಾಯಿತು. ಈಗ ಬದಲಾದ ಗ್ರಾಹಕರ ಅಭಿರುಚಿ, ಬದಲಾದ ಮಾರುಕಟ್ಟೆ ಶೈಲಿಗೆ ಅನುಗುಣವಾಗಿ ಎಲ್ಲ ಬಗೆಯ ಆಧುನಿಕ ಸವಲತ್ತುಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ವಜ್ರಾಭರಣ ಪ್ರಿಯ ಗ್ರಾಹಕರಿಗಾಗಿ ಸ್ಪಂದಿಸಲಾಗಿದೆ. ಇನ್ನಷ್ಟು ಹೊಸತನದೊಂದಿಗೆ- ಸದಾ ಸಂತೋಷಕ್ಕಾಗಿ ಎಂಬ ಘೋಷ ವಾಕ್ಯ ಬಿಡುಗಡೆ ಮಾಡಲಾಗಿದೆ. ಮುಳಿಯಕ್ಕೆ ಹೊಸ ಲೋಗೋ ಅಳವಡಿಸಲಾಗಿದೆ. ಮಿನುಗುವ ನಕ್ಷತ್ರ ಲೋಗೋದಲ್ಲಿ ಹೊಳೆಯುತ್ತಿದೆ. ಸಮೃದ್ಧಿಯ ಸಂಕೇತವಾದ ಬಿಳಿ ಆನೆ ಮರಿ ಚಿತ್ರವನ್ನು ಪ್ರತ್ಯೇಕವಾಗಿ ಫೋಕಸ್ ಮಾಡಲಾಗಿದೆ. ಸಂಸ್ಥೆಯನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸಲಾಗುತ್ತಿದ್ದು, ಬ್ರ್ಯಾಂಡ್ ಅಂಬಾಸೀಡರ್ ಆಗಿ ಚಿತ್ರನಟ ರಮೇಶ್ ಅರವಿಂದ್ ಸೇರಿಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರ್ಯಾಂಚ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್, ಬ್ರ್ಯಾಂಡ್ ಕನ್ಸಲ್ಟೆಂಟ್ ವೇಣು ಶರ್ಮ ಉಪಸ್ಥಿತರಿದ್ದರು.