ಕಳ್ಳ ಸಾಗಣೆದಾರರು ಬಚ್ಚಿಟ್ಟ ಚಿನ್ನ
ಕೋಲ್ಕತ: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕಲ್ಯಾಣಿ ಬಾರ್ಡರ್ ಔಟ್‌ಪೋಸ್ಟ್ ಪ್ರದೇಶದಲ್ಲಿರುವ ಕೊಳದಿಂದ 2.57 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಗಡಿ ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ಚಿನ್ನ ಪತ್ತೆಹಚ್ಚಲು ಬಿಎಸ್‌ಎಫ್ ತಂಡ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭದಲ್ಲಿ ಕೊಳದ ತಳದಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ.
ಕಳ್ಳ ಸಾಗಣೆದಾರರು ಕೊಳದ ಹೊಂಡದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರು. ಕೆಲ ತಿಂಗಳ ಹಿಂದೆ ಪೊಲೀಸರು ಚಿನ್ನ ಕಳ್ಳ ಸಾಗಣೆದಾರನೊಬ್ಬನನ್ನು ಹಿಡಿದಿದ್ದರು. ಆದರೆ ಅವನ ಬಳಿ ಚಿನ್ನ ಪತ್ತೆಯಾಗದ ಕಾರಣ ಬಿಟ್ಟು ಬಿಟ್ಟಿದ್ದರು. ಆತ ದೇಶದ ಗಡಿಭಾಗದಲ್ಲೆಲ್ಲೋ ಸಿಕ್ಕಿ ಬೀಳುವ ಭಯದಲ್ಲಿ ಚಿನ್ನವನ್ನು ಕೊಳದೊಳಗೆ ಎಸೆದಿದ್ದ. ಕೆಲವು ದಿನಗಳಿಂದ ಅದನ್ನು ಹುಡುಕುತ್ತಿದ್ದ. ಗಡಿ ಭದ್ರತಾ ಸಿಬ್ಬಂದಿ ಅವನ ಚಲನವಲನದಿಂದ ಅನುಮಾನ ಬಂದು ಶೋಧಿಸಿದಾಗ ಕೊಳದ ತಳದಲ್ಲಿ ಸುಮಾರು 2.57 ಕೋ. ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ಕೊಳದಲ್ಲಿ 40 ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಚಿನ್ನದ ಮಾರುಕಟ್ಟೆ ಮೌಲ್ಯ ಸುಮಾರು 2.57 ಕೋಟಿ ರೂ. ಎಂದು ಬಿಎಸ್‌ಎಫ್ ಟ್ವೀಟ್ ಮಾಡಿದೆ.