ಲಖನೌ: ಇಲ್ಲಿನ ಲೋಕಬಂಧು ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 200 ರೋಗಿಗಳನ್ನು ಕ್ಷಿಪ್ರವಾಗಿ ರಕ್ಷಿಸಿದ ಪರಿಣಾಮವಾಗಿ ಭಾರಿ ದುರಂತ ಸಂಭವಿಸುವುದು ತಪ್ಪಿದೆ.
ರಾತ್ರಿ 10.30ರ ವೇಳೆಗೆ ಬೆಂಕಿ ಕಾಣಿಸಿಕೊಂಡು ಕ್ಷಿಪ್ರವಾಗಿ ಹರಡಿದೆ. ಇಡೀ ಆಸ್ಪತ್ರೆ ಹೊಗೆಯಿಂದ ಆವೃತ್ತವಾಗಿದ್ದು, ತುರ್ತು ನಿಗಾ ಘಟಕಕ್ಕೂ ವ್ಯಾಪಿಸಿತ್ತು. ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಮಹಿಳಾ ವಾರ್ಡ್ ಮತ್ತು ತುರ್ತು ಚಿಕಿತ್ಸೆ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಆಗ್ನಿಶಾಮಕ ಪಡೆಯವರು ಹೇಳಿದ್ದಾರೆ.
ಸುಮಾರು 24 ರೋಗಿಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಎಲ್ಲ ರೋಗಿಗಳ ಸ್ಥಿತಿ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿದ್ದ ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ರಾಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.