ಸಿದ್ದರಾಮಯ್ಯನವರಿಗೆ ಕ್ಲೀನ್‌ಚಿಟ್ ನೀಡಿರುವ ಲೋಕಾಯುಕ್ತ
ಮೈಸೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಲೋಕಾಯುಕ್ತರು ನೀಡಿರುವ ಕ್ಲೀನ್‌ಚೀಟ್ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಜನಪ್ರತಿನಿಧಿ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಜನಪ್ರತಿನಿಧಿ ನ್ಯಾಯಾಲಯಕ್ಕೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದರು. ಜೊತೆಗೆ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ಕೂಡ ಲೋಕಾಯುಕ್ತ ವರದಿ ಪ್ರಶ್ನಿಸಿ ಅರ್ಜಿ ಹಾಕಿತ್ತು. ಎಲ್ಲರ ವಾದ ಆಲಿಸಿರುವ ನ್ಯಾಯಾಲಯ ಇವತ್ತು ಲೋಕಾಯುಕ್ತ ವರದಿ ಒಪ್ಪಿಕೊಳ್ಳಬೇಕಾ ಅಥವಾ ತಿರಸ್ಕರಿಸಬೇಕಾ ಎಂಬ ತೀರ್ಪು ನೀಡಲಿದೆ.
ಜನಪ್ರತಿನಿಧಿ ನ್ಯಾಯಾಲಯ ಲೋಕಾಯುಕ್ತ ತನಿಖಾ ವರದಿ ರದ್ದು ಮಾಡುವ ವಿಶ್ವಾಸವಿದೆ. ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಮೇಲಿನ ಎಲ್ಲ ಆರೋಪಗಳಿಗೆ ಸಾಕ್ಷಿ ಇವೆ. ಲೋಕಾಯುಕ್ತ ಮುಖ್ಯಮಂತ್ರಿ ಪ್ರಭಾವಕ್ಕೆ ಒಳಗಾಗಿ ಕ್ಲೀನ್‌ಚೀಟ್ ಕೊಟ್ಟಿದೆ. ನ್ಯಾಯಾಲಯಕ್ಕೆ ಇದನ್ನು ಮನವರಿಕೆ ಮಾಡಿದ್ದೇವೆ. ನ್ಯಾಯಾಲಯ ಲೋಕಾಯುಕ್ತ ವರದಿ ತಿರಸ್ಕರಿಸದೆ ಇದ್ದರೆ ನಾನು ಹೈಕೋರ್ಟ್‌ಗೆ ಅರ್ಜಿ ಹಾಕುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.