ಪುತ್ತೂರು : ಏಪ್ರಿಲ್ 13 ರ ಭಾನುವಾರದ ಸುಡು ಬಿಸಿಲಿನ ಬೆಂಕಿಗೂಡಿನಲ್ಲಿ ನಡೆದ ಹೃದಯಸ್ಪರ್ಶಿ ಕಾರ್ಯಕ್ರಮವಿದು.

ಕೇವಲ 9 ವರ್ಷದ ಬಾಲಕಿ ಸಂಪ್ರೀತಿ ಎಸ್. ಪ್ರಭು ಅವರು ತಮ್ಮ ಕರುಣಾಮಯಿ ಕಾರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬೇಸಿಗೆಯ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಂಪ್ರೀತಿ ಅವರು ಪೆಟ್ರೋಲ್ ಪಂಪ್ ಗಳಲ್ಲಿ, ಬೀದಿ ಬದಿ ತರಕಾರಿ ಮಾರುಕಟ್ಟೆಗಳಲ್ಲಿ, ವಾಹನ ದುರಸ್ತಿ ಕೇಂದ್ರಗಳಲ್ಲಿ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ತಂಪಾದ ಜ್ಯೂಸ್ ಮತ್ತು ಪಾನೀಯಗಳನ್ನು ವಿತರಿಸುವ ಉದಾತ್ತ ಕಾರ್ಯವನ್ನು ಆರಂಭಿಸಿದ್ದಾರೆ.

ಬಿಸಿಲಿನಲ್ಲಿ ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸುತ್ತಿರುವ ಈ ಕಾರ್ಮಿಕರ ಕಷ್ಟವನ್ನು ಅರಿತ ಸಂಪ್ರೀತಿ, ಅವರಿಗೆ ಕೊಂಚವಾದರೂ ನೆಮ್ಮದಿ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಅವರು ಸ್ವತಃ ವಿವಿಧ ಸ್ಥಳಗಳಿಗೆ ತೆರಳಿ ಕಾರ್ಮಿಕರಿಗೆ ಜ್ಯೂಸ್ ವಿತರಿಸುತ್ತಿರುವುದು ಕಂಡುಬಂದಿದೆ.
ಈ ಕುರಿತು ಮಾತನಾಡಿದ ಸ್ಥಳೀಯ ಪೆಟ್ರೋಲ್ ಪಂಪ್ ನ ಕಾರ್ಮಿಕರೊಬ್ಬರು, “ಚಿಕ್ಕ ಹುಡುಗಿಯೊಬ್ಬಳು ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡು ತಂಪು ಪಾನೀಯ ನೀಡುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ. ಇಂತಹ ಕಾರ್ಯಗಳು ನಮಗೆಲ್ಲಾ ಪ್ರೇರಣೆ ನೀಡುತ್ತವೆ” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಪ್ರೀತಿ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಚಿಕ್ಕ ವಯಸ್ಸಿನಲ್ಲೇ ಇಂತಹ ಮಾನವೀಯ ಕಾಳಜಿ ತೋರಿರುವುದು ನಿಜಕ್ಕೂ ಶ್ಲಾಘನೀಯ. ಇದು ಕೇವಲ ಜ್ಯೂಸ್ ವಿತರಣೆಯ ಕಾರ್ಯಕ್ರಮವಾಗಿರದೇ, ಸಮಾಜದಲ್ಲಿ ಪರಸ್ಪರ ಸಹಾಯ ಮತ್ತು ಕಾಳಜಿಯ ಮಹತ್ವವನ್ನು ಎತ್ತಿ ತೋರಿಸುವ ಪ್ರಯತ್ನವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಂಪ್ರೀತಿ ಅವರ ಈ ಸಮಾಜಮುಖಿ ಕಾರ್ಯವು ಇತರರಿಗೂ ಸ್ಫೂರ್ತಿ ನೀಡುವಂತಿದೆ. ಇಂತಹ ಸಣ್ಣ ಸಣ್ಣ ಪ್ರಯತ್ನಗಳ ಮೂಲಕವೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ತಂದೆ ಪ್ರೊಫೆಸರ್, ತಾಯಿ ಶಿಕ್ಷಕಿ
ಸಂಪ್ರೀತಿಯ ತಂದೆ ಮಂಗಳೂರಿನ ಎಸ್. ಡಿ.ಎಂ. ಲಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದು ತಾಯಿ ಸವಿತಾ ಉಪ್ಪಳಿಗೆಯ ಸರಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ. ಸಂಪ್ರೀತಿ ಹಿರಿಯ ಸಹೋದರಿ ಸಾನ್ವಿ ಎಸ್. ಪ್ರಭು ತಂಗಿಯ ಕಾರ್ಯಕ್ಕೆ ಬೆಂಬಲ ನೀಡುತ್ತಿದ್ದಾಳೆ. ಇವರ ಕುಟುಂಬ ಕೇಪುಳುವಿನ 87ನೇ ಲೈಟ್ ಕಂಬದ ಬಳಿಯ ಸಿಗಂದೂರು ಮನೆಯಲ್ಲಿ ವಾಸವಾಗಿದೆ.
ಈಕೆಯ ಸೇವಾ ಕಾರ್ಯವು ಮುಂದುವರಿಯಲಿ ಮತ್ತು ಸಮಾಜಕ್ಕೆ ಇನ್ನಷ್ಟು ಉಪಕಾರಿಯಾಗಲಿ ಎಂದು ಆಶಿಸೋಣ.