ಮನೆಗೆ ನುಗ್ಗಿ ಸಾಯಿಸುತ್ತೇವೆ, ಇಲ್ಲವೇ ಕಾರು ಸ್ಫೋಟಿಸುತ್ತೇವೆ ಎಂದು ಧಮಕಿ
ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೊಮ್ಮೆ ಜೀವ ಬೆದರಿಕೆ ಸಂದೇಶ ಬಂದಿದೆ. ಮುಂಬಯಿಯ ವರ್ಲಿ ವಿಭಾಗದ ಸಂಚಾರಿ ಪೊಲೀಸರ ವಾಟ್ಸಪ್ ನಂಬರ್‌ಗೆ ಕಳುಹಿಸಿರುವ ಸಂದೇಶದಲ್ಲಿ ನಟನನ್ನು ಮನೆಗೆ ನುಗ್ಗಿ ಅಥವಾ ಕಾರು ಸ್ಫೋಟಿಸಿ ಸಾಯಿಸಿಲಿದ್ದೇವೆ ಎಂದು ಬೆದರಿಕೆಯೊಡ್ಡಲಾಗಿದೆ. ಒಂದು ವರ್ಷದ ಹಿಂದೆ ನಟನ ಮನೆಯೆದುರು ಇಬ್ಬರು ವ್ಯಕ್ತಿಗಳು ಬೈಕಿನಲ್ಲಿ ಬಂದು ಗುಂಡು ಹಾರಿಸಿದ್ದರು. ಅನಂತರ ಸಲ್ಮಾನ್ ಖಾನ್‌ಗೆ ಪದೇ ಪದೆ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆ. ವರ್ಲಿ ಪೊಲೀಸರು ಅಜ್ಞಾತ ವ್ಯಕ್ತಿಗಳ ವಿರುದ್ಧ ಜೀವ ಬೆದರಿಕೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂದೇಶ ಕಳುಹಿಸಿದ ವಾಟ್ಸಪ್ ನಂಬರ್ ಯಾರಿಗೆ ಸೇರಿದ್ದು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತದೆ.
1998ರಲ್ಲಿ ರಾಜಸ್ಥಾನಕ್ಕೆ ಚಿತ್ರೀಕರಣಕ್ಕೆ ತೆರಳಿದ್ದ ಸಂದರ್ಭ ಬಿಷ್ಣೋಯ್ ಜನಾಂಗದವರ ಪವಿತ್ರ ಕೃಷ್ಣ ಮೃಗವನ್ನು ಬೇಟೆಯಾಡಿದ ಬಳಿಕ ಸಲ್ಮಾನ್ ಖಾನ್ ಈ ಜನಾಂಗಕ್ಕೆ ಸೇರಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಲ್ಮಾನ್ ಖಾನ್ ಕೃಷ್ಣ ಬೇಟೆಯಾಡಿದ ಸಂದರ್ಭದಲ್ಲಿ ಲಾರೆನ್ಸ್ ಬಿಷ್ಣೋಯ್ ಹುಟ್ಟಿರಲಿಲ್ಲವಾದರೂ ತನ್ನ ಜನಾಂಗಕ್ಕಾಗಿರುವ ಅಪಚಾರವನ್ನು ತಿಳಿದ ಬಳಿಕ ಸೇಡು ಬೆಳೆಸಿಕೊಂಡಿದ್ದಾನೆ ಎನ್ನಲಾಗಿದೆ. ಈತನ ಗ್ಯಾಂಗ್ ಹಲವು ಸಲ ಸಲ್ಮಾನ್ ಖಾನ್ ಹತ್ಯೆಗೆ ಪ್ರಯತ್ನಿಸಿದೆ. ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನ್ಯಾಯಾಲಯ ನಟನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಕಳೆದ ವರ್ಷ ಸಲ್ಮಾನ್‌ಗೆ ಬಿಷ್ಣೋಯಿಗಳ ದೇವಸ್ಥಾನಕ್ಕೆ ಹೋಗಿ ಬಹಿರಂಗವಾಗಿ ಕ್ಷಮೆ ಯಾಚಿಸಿ 5 ಕೋ. ರೂ. ತಪ್ಪುಕಾಣಿಕೆ ಹಾಕಬೇಕೆಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದಿತ್ತು. ಇದಕ್ಕೂ ಮೊದಲು ಹಲವು ಸಲ ಲಾರೆನ್ಸ್ ಗ್ಯಾಂಗ್ ಸಲ್ಮಾನ್ ಖಾನ್‌ಗೆ ಬೆದರಿಕೆಯೊಡ್ಡಿತ್ತು. ಮಾತ್ರವಲ್ಲದೆ ಸಲ್ಮಾನ್ ಖಾನ್‌ಗೆ ಆತ್ಮೀಯರಾಗಿದ್ದರು ಎಂಬ ಕಾರಣಕ್ಕೆ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಜನರ ಎದುರೇ ಗುಂಡಿಕ್ಕಿ ಸಾಯಿಸಿತ್ತು.
ಈ ಘಟನೆ ಬಳಿಕ ಸಲ್ಮಾನ್ ಜೀವಕ್ಕೆ ಅಪಾಯ ಹೆಚ್ಚಾಗಿದ್ದು, ನಟ ಗರಿಷ್ಠ ಕಣ್ಗಾಲಿನ ನಡುವೆ ಬದುಕುವ ಪರಿಸ್ಥಿ ಉಂಟಾಗಿದೆ. ತನ್ನ ರಕ್ಷಣೆಗಾಗಿ ನಟ ದೊಡ್ಡ ಅಂಗರಕ್ಷಕನ ಪಡೆಯನ್ನು ಇಟ್ಟುಕೊಂಡಿದ್ದಾರೆ ಹಾಗೂ ಬಾಂಬ್ ನಿರೋಧಕ ಕಾರು ತರಿಸಿಕೊಂಡಿದ್ದಾರೆ. ಮನೆಗೂ ಗುಂಡು ನಿರೋಧಕ ಗಾಜುಗಳನ್ನು ಅಳವಡಿಸಿದ್ದಾರೆ.