ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಗುಂಡಿಟ್ಟು ಕೊಂದಿರುವುದು ರಾಜ್ಯಾದ್ಯಂತ ಸಂಚಲನವುಂಟುಮಾಡಿದೆ. ರಾಜ್ಯದಲ್ಲಿ ಆರೋಪಿಯನ್ನು ಈ ರೀತಿ ಎನ್‌ಕೌಂಟರ್‌ನಲ್ಲಿ ಸಾಯಿಸಿರುವುದು ಬಹಳ ಅಪರೂಪದ ಪ್ರಕರಣವಾಗಿದೆ. ಶಿಶುಕಾಮಿ ಆರೋಪಿಯನ್ನು ಪೊಲೀಸರು ಗುಂಟಿಕ್ಕಿ ಸಾಯಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಜನರು ಜೈಕಾರ ಹಾಕಿದ್ದಾರೆ. ಈ ವೀಡಿಯೊ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆರೋಪಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಸೇರಿದ್ದ ಜನ ಚಪ್ಪಾಳೆ ತಟ್ಟಿ, ಜೈಕಾರ ಹಾಕಿದರು. ಪೊಲೀಸರು ಬಳಿಕ ಜನರನ್ನು ಅಲ್ಲಿಂದ ಚದುರಿಸಿದ್ದಾರೆ. ಹುಬ್ಬಳ್ಳಿಯ ಕಮಿಷನರ್ ಎನ್. ಶಶಿಕುಮಾರ್ ಈ ಮೊದಲು ಮಂಗಳೂರಿನಲ್ಲಿ ಕಮಿಷನರ್ ಆಗಿದ್ದರು.
ಬಿಹಾರ ಮೂಲದ ರಿತೇಶ್ ಕುಮಾರ್ ಪೊಲೀಸರ ಗುಂಡಿಗೆ ಬಲಿಯಾದ ಆರೋಪಿ. ಹುಬ್ಬಳ್ಳಿಯ ವಿಜಯನಗರದ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಬಾಲಕಿ ಹೆತ್ತವರು ಕೂಲಿ ಕಾರ್ಮಿಕರಾಗಿದ್ದಾರೆ. ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಮನೆಗೆಲಸ ಮಾಡುತ್ತಿದ್ದಾರೆ. ಮೃತ ಬಾಲಕಿಯ ತಾಯಿ ಏ.13ರಂದು ಮನೆಗೆಲಸಕ್ಕೆಂದು ವಿಜಯನಗರಕ್ಕೆ ಹೋಗಿದ್ದರು. ತಾಯಿ ಜೊತೆ ಬಾಲಕಿ ಕೂಡ ಹೋಗಿದ್ದಾಳೆ. ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದಾಗ, ಬಾಲಕಿ ಮನೆಯ ಹೊರಗಡೆ ಆಟವಾಡುತ್ತಿದ್ದಳು. ಈ ವೇಳೆ ಇಲ್ಲಿಗೆ ಬಂದ ಆರೋಪಿ ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಬಾಲಕಿ ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ ಅಧ್ಯಾಪಕ ನಗರದ ಖಾಲಿ ಜಾಗದಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಬಾಲಕಿ ಹತ್ಯೆ ಖಂಡಿಸಿ ಅಶೋಕನಗರ ಠಾಣೆ ಎದುರು ಸ್ಥಳೀಯರು ಧರಣಿ ನಡೆಸಿದ್ದರು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಅಡಗಿರುವ ಸ್ಥಳದ ಮಾಹಿತಿ ತಿಳಿದ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ದಾಳಿ ಮಾಡಿ, ಓಡಿ ಹೋಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು ಆರೋಪಿಯ ಬೆನ್ನಿಗೆ ಮತ್ತು ಕಾಲಿಗೆ ತಗಲಿದೆ. ಕೂಡಲೇ ಪೊಲೀಸರು ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಿಸಿಟಿವಿ ದೃಶ್ಯಾವಗಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಯ ಹಚ್ಚಲಾಗಿತ್ತು. ಆರೋಪಿ ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ವಾಸವಿದ್ದನು. ಈ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲು ತೆರಳಿದಾಗ ನಮ್ಮ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಪಿಎಸ್ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರು. ಆರೋಪಿ ಓಡಿ ಹೋಗಲು ಯತ್ನಿಸಿದಾಗ ಆತನ ಮೇಲೆ ಫೈರಿಂಗ್ ಮಾಡಿದರು. ಆರೋಪಿಯ ಬೆನ್ನಿಗೆ ಗುಂಡು ತಗುಲಿತ್ತು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಮೃತಪಟ್ಟಿದ್ದಾನೆ. ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಬಿಡಲ್ಲ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.