ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿ ಬಾವಿಯೊಳಗಿದೆ ಶವ- ಕೊಲೆ ಶಂಕೆ
ಮೂಲ್ಕಿ: ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದ ಮೂಲ್ಕಿಯ ಆಟೋ ಚಾಲಕನ ಮೃತದೇಹ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿ ನಿರ್ಜನ ಪ್ರದೇಶದ ಬಾವಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮೂಲ್ಕಿ ಕೊಳ್ನಾಡಿನ ಮುಹಮ್ಮದ್ ಶರೀಫ್ (52) ಮೃತಪಟ್ಟವರು. ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ ಇವರು ಅಂದು ಮನೆಗೆ ಬಾರದೆ ನಾಪತ್ತೆಯಾಗಿದ್ದರು.
ಪತ್ನಿ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದಂತೆ ಗುರುವಾರ ರಾತ್ರಿ ಕೇರಳ- ಕರ್ನಾಟಕ ಗಡಿ ಭಾಗದ ಕುಂಜತ್ತೂರು ಪದವು ಎಂಬಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಮೀಪದಲ್ಲಿ ಇವರ ಆಟೋ ರಿಕ್ಷಾ ಕೂಡಾ ಕಂಡು ಬಂದಿದೆ. ಮೃತದೇಹವನ್ನು ಇಂದು ಬೆಳಗ್ಗೆ ಮೇಲಕ್ಕೆತ್ತಲು ಸಿದ್ಧತೆ ನಡೆಯುತ್ತಿದೆ. ಮಾಹಿತಿ ತಿಳಿದು ಶರೀಫ್ ಮನೆಯವರು ಹಾಗೂ ಸಂಬಂಧಿಕರು ಮಂಜೇಶ್ವರಕ್ಕೆ ತಲುಪಿದ್ದು, ಶುಕ್ರವಾರ ಬೆಳಗ್ಗೆ ಪೊಲೀಸ್ ಶ್ವಾನದಳ, ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಲಿದ್ದಾರೆ. ಬಳಿಕ ಮೃತದೇಹವನ್ನು ಮೇಲಕ್ಕೆತ್ತಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಜೂಜಾಟ ಆಟೋ ಚಾಲಕನ ಕೊಲೆಗೆ ಕಾರಣವಾಗಿದೆಯೇ ಅಥವಾ ಮಾದಕ ವ್ಯಸನಿ ಗಳು ಬಾಡಿಗೆಗೆ ಕರೆದೊಯ್ದು ಈ ಕೃತ್ಯ ನಡೆಸಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.