ಬೆಲೆ ಏರಿಕೆ, ದುರಾಡಳಿತ ವಿರುದ್ಧ ಜೆಡಿಎಸ್ ವಿನೂತನ ಹೋರಾಟ
ಬೆಂಗಳೂರು: ಒಂದೆಡೆ ಬಿಜೆಪಿ ಬೆಲೆ ಏರಿಕೆ ಹಾಗೂ ರಾಜ್ಯ ಸರಕಾರದ ದುರಾಡಳಿತದ ವಿರುದ್ಧ ರಾಜ್ಯವ್ಯಾಪಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದರೆ ಇನ್ನೊಂದೆಡೆ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್ ತಾನೂ ಹೋರಾಟಕ್ಕಿಳಿಯಲು ಮುಂದಾಗಿದೆ. ಏ.12ರಿಂದ ಜೆಡಿಎಸ್‌ನ ‘ಸಾಕಪ್ಪ ಸಾಕು, ಕಾಂಗ್ರೆಸ್ ಸರ್ಕಾರ’ ಎಂಬ ವಿನೂತನ ಅಭಿಯಾನ ಶುರುವಾಗಲಿದೆ.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಎಂಬ ಅಭಿಯಾನ ಆರಂಭ ಮಾಡಿದ್ದು, ಈ ಅಭಿಯಾನ ತೀವ್ರ ಸಂಚಲನ ಸೃಷ್ಟಿಸಿದೆ. https://www.saakappasaaku.com ಎಂಬ ವೆಬ್‌ಸೈಟ್ ಮೂಲಕ ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ, ಯಾರೇ ಆದರೂ ನೋಂದಣಿ ಮಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಆರ್ಥಿಕವಾಗಿ ರಾಜ್ಯವನ್ನು ವಿಕೋಪದ ಪರಿಸ್ಥಿತಿಗೆ ದೂಡಿರುವ ಕಾಂಗ್ರೆಸ್ ಸರಕಾರ, ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಾಡಿನ ಜನರನ್ನು ಕಾಂಗ್ರೆಸ್ ನಿರಂತರವಾಗಿ ಶೋಷಣೆ ಮಾಡುತ್ತಿದೆ. ಜನರು ರೋಸಿ ಹೋಗಿದ್ದಾರೆ. ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕು. ಅದಕ್ಕೆ ನಾವು ಹೋರಾಟಕ್ಕೆ ಧುಮುಕಿದ್ದೇವೆ. ನಾವು ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಸಾಕು’ ಎಂಬ ಅಭಿಯಾನ ಶುರು ಮಾಡಿದ್ದೇವೆ ಎಂದು ತಿಳಿಸಿದರು. ಜೆಡಿಎಸ್ ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.