2013ರಲ್ಲಿ ಹೈದರಾಬಾದ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಗಳು
ಹೈದರಾಬಾದ್: ಹೈದರಾಬಾದ್‌ನಲ್ಲಿ 2013ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಂಡಿಯನ್ ಮುಜಾಹಿದಿನ್ ಉಗ್ರ ಯಾಸಿನ್ ಭಟ್ಕಳ್ ಸೇರಿ ಐವರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯನ್ನು ತೆಲಂಗಾಣ ಹೈಕೋರ್ಟ್ ಎತ್ತಿಹಿಡಿದಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ನ ಈ ಐವರು ಭಯೋತ್ಪಾದಕರು 2013ರಲ್ಲಿ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಸ್ಫೋಟದಲ್ಲಿ 18 ಮಂದಿ ಸಾವನ್ನಪ್ಪಿ, 131 ಜನರು ಗಾಯಗೊಂಡಿದ್ದರು. ನ್ಯಾಯಮೂರ್ತಿಗಳಾದ ಲಕ್ಷ್ಮಣ್ ಮತ್ತು ಪಿ. ಶ್ರೀಸುಧಾ ಅವರ ಪೀಠ ಭಯೋತ್ಪಾದಕರು ಗಲ್ಲು ಶಿಕ್ಷೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ, ಎನ್‌ಐಎ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ದೃಢಪಡಿಸಲಾಗಿದೆ ಎಂದು ಪೀಠ ತಿಳಿಸಿದೆ.
ಈ ಮೊದಲು ಇಂಡಿಯನ್ ಮುಜಾಹಿದಿನ್ ಸಹಸ್ಥಾಪಕ ಮೊಹಮ್ಮದ್ ಅಹ್ಮದ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್, ಪಾಕಿಸ್ಥಾನಿ ಪ್ರಜೆ ಜಿಯಾ-ಉರ್-ರೆಹಮಾನ್ ಅಲಿಯಾಸ್ ವಕಾಸ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಮೊನ್ಜಾ ಹದ್ದಿ ಸೇರಿದಂತೆ ಐವರು ಸದಸ್ಯರನ್ನು ಎನ್‌ಐಎ ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಿ ಗಲ್ಲು ಶಿಕ್ಷೆ ವಿಧಿಸಿತ್ತು. ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ರಿಯಾಜ್ ಭಟ್ಕಳ್ ತಲೆಮರೆಸಿಕೋಮಡಿದ್ದು, ಎನ್‌ಐಎ ಅವನನ್ನು ಈಗಲೂ ಹುಡುಕುತ್ತಿದೆ. ಅವನು ಪಾಕಿಸ್ಥಾನದಲ್ಲಿ ಅಡಗಿರುವ ಅನುಮಾನವಿದೆ. ಆರೋಪಿಗಳ ವಕೀಲ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಮನವಿ ಮಾಡಿದ್ದರು. ಇದನ್ನು ತಿರಸ್ಕರಿಸಿದ ಹೈಕೋರ್ಟ್ ಪೀಠ ಈ ಅಪರಾಧಿಗಳು ಜೀವಾವಧಿ ಶಿಕ್ಷೆಯಿಂದ ಸುಧಾರಣೆಯಾಗುತ್ತಾರೆ ಎಂಬ ಯಾವುದೇ ವಿಶ್ವಾಸವಿಲ್ಲ, ಇದೊಂದು ವಿಫಲ ಪ್ರಯತ್ನವಾಗಬಹುದು ಎಂದು ಅಭಿಪ್ರಾಯಪಟ್ಟಿದೆ. ಎಲ್ಲ ಐವರು ಅಪರಾಧಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿ 2016ರಲ್ಲಿ ತೀರ್ಪು ನೀಡಿತ್ತು.