ಬಿಗುಭದ್ರತೆಯಲ್ಲಿ ಕರೆತರುತ್ತಿರುವ ಅಧಿಕಾರಿಗಳು, ತಡರಾತ್ರಿ ಬಂದಿಳಿಯುವ ಸಾಧ್ಯತೆ
ನವದೆಹಲಿ : ವಾಣಿಜ್ಯ ನಗರಿ ಮುಂಬಯಿ ಮೇಲೆ 2008ರಲ್ಲಾದ ಭಯೋತ್ಪಾದಕ ದಾಳಿಯ ರೂವಾರಿ ತಹಾವುರ್ ರಾಣಾ ಕೊನೆಗೂ ಅಮೆರಿಕದಿಂದ ಗಡಿಪಾರು ಆಗಿದ್ದು, ಇಂದು ಅಧಿಕಾರಿಗಳು ಅವನನ್ನು ಭಾರತಕ್ಕೆ ಕರೆತರುತ್ತಿದ್ದಾರೆ. ತನಿಖಾಧಿಕಾರಿಗಳ ಜೊತೆ ವಿಶೇಷ ಭದ್ರತಾ ತಂಡವೊಂದು ತಹಾವುರ್ ರಾಣಾನನ್ನು ಭಾರತಕ್ಕೆ ಕರೆತರುತ್ತಿದೆ. ತಡರಾತ್ರಿ ಅಥವಾ ನಾಳೆ ನಸುಕಿನ ಹೊತ್ತು ಅವರ ವಿಮಾನ ಭಾರತದಲ್ಲಿ ಬಂದಿಳಿಯಲಿದೆ.
ತಹಾವುರ್ ರಾಣಾನನ್ನು ಯಾವ ಜೈಲಿನಲ್ಲಿಡಲಾಗುತ್ತದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ದಿಲ್ಲಿಯ ತಿಹಾರ್ ಮತ್ತು ಮುಂಬಯಿಯ ಆರ್ಥರ್ ರೋಡ್ ಜೈಲಿನಲ್ಲಿ ಬಿಗು ಬಂದೋಬಸ್ತಿನ ಏರ್ಪಾಡು ಮಾಡಲಾಗಿದ್ದು, ಈ ಎರಡು ಜೈಲುಗಳ ಪೈಕಿ ಒಂದರಲ್ಲಿ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.
2008ರಲ್ಲಿ ಮುಂಬಯಿ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯಾಗಿರುವ ತಹಾವುರ್ ರಾಣಾ ಪಾಕಿಸ್ಥಾನ ಪ್ರಜೆಯಾಗಿದ್ದರೂ ಕೆನಡದಲ್ಲಿ ಉದ್ಯಮಿಯ ಸೋಗಿನಲ್ಲಿ ವಾಸವಾಗಿದ್ದ. ದಾಳಿಗೂ ಕೆಲವು ತಿಂಗಳು ಮೊದಲು ಮುಂಬಯಿಗೆ ಬಂದು ದಾಳಿ ಮಾಡಬೇಕಾದ ಸ್ಥಳಗಳನ್ನು ನೋಡಿಕೊಂಡು ಹೋಗಿದ್ದ ಡೇವಿಡ್ ಕೊಲಮನ್ ಹೆಡ್ಲಿ ಎಂಬಾತನಿಗೆ ಪ್ರಯಾಣದ ದಾಖಲೆಪತ್ರಗಳು ಮತ್ತಿತರ ವ್ಯವಸ್ಥೆ ಮಾಡಿಕೊಟ್ಟವನು ರಾಣಾ. ಆತ ದಾಳಿ ಯೋಜನೆಯನ್ನು ಕಾರ್ಯಗತಗೊಳಿಸಿದ ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯ್ಯಬದ ಸಕ್ರಿಯ ಸದಸ್ಯನಾಗಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಭಾರತಕ್ಕೆ ಬಂದ ಬಳಿಕ ಕೆಲವು ವಾರ ಅವನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಕಸ್ಟಡಿಯಲ್ಲಿ ಇರುತ್ತಾನೆ ಎನ್ನಲಾಗಿದೆ. ತಹಾವುರ್ ರಾಣಾನನ್ನು ಗಡಿಪಾರು ಮಾಡುವ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಹಲ್ ವಿಶೇಷ ಪ್ರಯತ್ನ ಪಟ್ಟಿದ್ದಾರೆ. ಕೇಂದ್ರ ಗೃಹ ಇಲಾಖೆಯ ತಂಡ ಮತ್ತು ಎನ್‌ಐಎ ಅಧಿಕಾರಿಗಳ ತಂಡಕ್ಕೆ ಬೆನ್ನೆಲುಬಾಗಿ ನಿಂತು ಪ್ರಯತ್ನಿಸಿದ ಪರಿಣಾಮವಾಗಿ ರಾಣಾ ಗಡಿಪಾರಾಗಿದ್ದಾನೆ. ಭಾರತಕ್ಕೆ ಗಡಿಪಾರು ಆಗುವುದರಿಂದ ತಪ್ಪಿಸಿಕೊಳ್ಳಲು ರಾಣಾ ಹಲವು ಪ್ರಯತ್ನಗಳನ್ನು ಮಾಡಿದ್ದರೂ ಅಮೆರಿಕದಲ್ಲಿ ಅಧಿಕಾರ ಬದಲಾದ ಬೆನ್ನಿಗೆ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಕೂಡ ರಾಣಾನನ ಗಡಿಪಾರಿಗೆ ಅನುಮತಿ ನೀಡಿದ ಬಳಿಕ ಗಡಿಪಾರು ಪ್ರಕ್ರಿಯೆ ತ್ವರಿತವಾಗಿ ಮುಗಿದು ಇಂದೇ ಅಮೆರಿಕದಿಂದ ಅವನನ್ನು ಕರೆತರಲಾಗುತ್ತಿದೆ.