ಮಗಳ ಮದುವೆಗೆ ತಂದಿಟ್ಟ ಆಭರಣ, ಹಣ ದೋಚಿಕೊಂಡು ಹೋದ ತಾಯಿ
ಲಖನೌ: ಮಗಳ ಮದುವೆಗೆ ಒಂಬತ್ತು ದಿನಗಳಷ್ಟೇ ಬಾಕಿಯಿರುವಾಗ ಭಾವಿ ಅಳಿಯನ ವಧುವಿನ ತಾಯಿ ಪಲಾಯನ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಅಲಿಘಡದಲ್ಲಿ ಸಂಭವಿಸಿದೆ. ಮದುವೆಯ ತಯಾರಿಗಳೆಲ್ಲ ಮುಗಿದಿದ್ದವು, ಆಭರಣ, ಉಡುಪು ಖರೀದಿಸಿಯಾಗಿತ್ತು. ನಿಶ್ಚಿತಾರ್ಥವೂ ನಡೆದುಹೋಗಿತ್ತು. ಹೀಗಿರುವಾಗ ಮದುವೆ ಹೆಣ್ಣಿನ ತಾಯಿಯೇ ಮಗಳ ಮದುವೆಗಾಗಿ ಮಾಡಿಟ್ಟ ಆಭರಣಗಳನ್ನು ದೋಚಿಕೊಂಡು ಭಾವಿ ಅಳಿಯನ ಜತೆ ಪರಾರಿಯಾಗಿದ್ದಾಳೆ.
ಭಾವಿ ಅಳಿಯ ಅತ್ತೆಯನ್ನು ಪ್ರೀತಿಸುತ್ತಿದ್ದ, ಮತ್ತು ಆ ಜೋಡಿ ಓಡಿ ಹೋಗಲು ನಿರ್ಧರಿಸಿತ್ತು. ಓಡಿ ಹೋಗುವ ಮೊದಲು ಮಹಿಳೆ ತನ್ನ ಮಗಳ ಮದುವೆಗಾಗಿ ಮಾಡಿದ್ದ ಆಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ. ಕೊನೆಗೆ ದಾರಿ ಕಾಣದೆ ವಧುವಿನ ಕಡೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾಯಿಯೇ ಮಗಳಿಗೆ ಗಂಡು ಹುಡುಕಿ ನಿಶ್ಚಿತಾರ್ಥ ನೆರವೇರಿಸಿದ್ದಳು. ನಂತರ ಮದುವೆಯ ಸಿದ್ಧತೆಗಳ ನೆಪದಲ್ಲಿ ವರ ಆಗಾಗ ಭಾವಿ ಹೆಂಡತಿಯ ಮನೆಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ಅಳಿಯ ಮತ್ತು ಅತ್ತೆಯ ನಡುವೆ ಅನುರಾಗ ಅರಳಿ ಸಂಬಂಧ ಬೆಳೆದಿದೆ. ವರ ಭಾವಿ ಅತ್ತೆಗೆ ಮೊಬೈಲ್ ಫೋನ್ ಕೂಡ ಗಿಫ್ಟ್ ಕೊಟ್ಟಿದ್ದ. ಆಗ ಅದನ್ನುಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗ ಅತ್ತೆ-ಅಳಿಯ ಪರಾರಿಯಾಗಿರುವಾಗಲೇ ಇದರ ಹಿಂದಿನ ಉದ್ದೇಶ ತಿಳಿದುಬಂದಿದೆ.