ಕಾಂಗ್ರೆಸ್ ಪಾಲಿಗೆ ವರವಾದ ನಿರ್ಧಾರ
ಮಂಗಳೂರು : ಬೆಲೆ ಏರಿಕೆಯನ್ನು ಪ್ರಧಾನ ವಿಷಯವಾಗಿಟ್ಟುಕೊಂಡು ಜನಾಕ್ರೋಶ ಯಾತ್ರೆ ಪ್ರಾರಂಭಿಸಿರುವ ರಾಜ್ಯ ಬಿಜೆಪಿಗೆ ಕೇಂದ್ರ ಸರಕಾರ ನಿನ್ನೆ ಕೈಗೊಂಡ ನಿರ್ಧಾರವೊಂದು ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ನಿನ್ನೆ ದಿಢೀರ್ ಎಂದು ಕೇಂದ್ರ ಸರಕಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿದೆ. ಇದರ ಜೊತೆಗೆ ಪೆಟ್ರೋಲು ಮತ್ತು ಡೀಸೆಲ್ ಮೇಲಿನ ಸುಂಕವನ್ನು ತಲಾ 2 ರೂ.ಯಂತೆ ಹೆಚ್ಚಿಸಿದೆ. ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರದ ವತಿಯಿಂದ ಆಗಿರುವ ಈ ಬೆಲೆ ಏರಿಕೆ ರಾಜ್ಯ ಬಿಜೆಪಿಗೆ ತೀವ್ರ ಹಿನ್ನಡೆಯುಂಟು ಮಾಡಿದರೆ ಕಾಂಗ್ರೆಸ್‌ಗೆ ಪ್ರತಿಭಟನೆಯ ಕಾವನ್ನು ತಗ್ಗಿಸಲು ಅತ್ಯುತ್ತಮ ಅಸ್ತ್ರವಾಗಿ ಸಿಕ್ಕಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಚಿಲ್ಲರೆ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಈ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ನೇರವಾಗಿ ತಟ್ಟುವುದಿಲ್ಲ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಅಡುಗೆ ಅನಿಲ ಬೆಲೆ ಏರಿಕೆ ಎಲ್ಲ ವರ್ಗದ ಜನರಿಗೂ ಅನ್ವಯಿಸುತ್ತದೆ. ಕೇಂದ್ರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಫಲಾನುಭವಿಗಳ ಸಿಲಿಂಡರ್‌ಗೂ 50 ರೂ. ಹೆಚ್ಚಿಸಲಾಗಿದೆ. ಜನಸಾಮಾನ್ಯರು ತಿಂಗಳಿಗೆ ಹೆಚ್ಚೆಂದರೆ ಒಂದು ಸಿಲಿಂಡರ್ ಬಳಸುತ್ತಾರಷ್ಟೆ. ಹೀಗಾಗಿ ಈ ಬೆಲೆ ಏರಿಕೆ ಬಡವರ ಪಾಲಿಗೆ ಭಾರಿ ಹೊರೆಯಲ್ಲ ಎಂದು ವಾದಿಸಬಹುದು. ಆದರೆ ಬೆಲೆ ಏರಿಕೆ ಹೋರಾಟದ ಸಂದರ್ಭದಲ್ಲಿ ತನ್ನದೇ ಸರಕಾರ ಮಾಡಿದ ಏರಿಕೆಯ ನಿರ್ಧಾರದಿಂದಾಗಿರುವ ಮುಜುಗರದಿಂದ ಪಾರಾಗಲು ಬಿಜೆಪಿ ಬಹಳ ಪ್ರಯಾಸಪಡಬೇಕಾಗುತ್ತದೆ.
ನಾಲ್ಕು ಹಂತಗಳ ಜನಾಕ್ರೋಶ ಯಾತ್ರೆಯನ್ನು ಸೋಮವಾರ ಬಿಜೆಪಿ ಮೈಸೂರಿನಲ್ಲಿ ಆರಂಭಿಸಿದ ಬೆನ್ನಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಬಿಜೆಪಿಯ ಈ ಪ್ರತಿಭಟನೆಯ ಕಾಳಜಿಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಬಿಜೆಪಿ ಪ್ರತಿಭಟನೆಗೆ ಮುಸ್ಲಿಮರ ಓಲೈಕೆ ನೀತಿ, ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಇತ್ಯಾದಿ ಇತರ ವಿಚಾರಗಳನ್ನು ಪ್ರಸ್ತಾಪಿಸಿದ್ದರೂ ಯಾತ್ರೆಯ ಪ್ರಮುಖ ಅಂಶ ಜನಸಾಮಾನ್ಯರನ್ನು ನೇರವಾಗಿ ತಟ್ಟಿರುವ ಬೆಲೆ ಏರಿಕೆ. ಈ ಅವಾಕಾಶವನ್ನು ಬಳಸಿಕೊಂಡು ರಾಜ್ಯದಲ್ಲಿ ಕಳೆದು ಹೋಗಿರುವ ತನ್ನ ವರ್ಚಸ್ಸನ್ನು ಮರಳಿ ಗಳಿಸಲು ಬಿಜೆಪಿ ಮುಂದಾಗಿರುವಾಗಲೇ ಕೇಂದ್ರ ಅದರ ಮೇಲೆ ತಣ್ಣೀರು ಎರಚಿದಂತಾಗಿದೆ.
ಇಂಥ ಒಂದು ಅವಕಾಶಕ್ಕಾಗಿಯೇ ಕಾಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ಕೇಂದ್ರದ ಬೆಲೆ ಏರಿಕೆ ಘೋಷಣೆ ಹೊರಬಿದ್ದ ಕೂಡಲೇ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರು ಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಜನರ ಮುಂದೆ ಬಿಚ್ಚಿಟ್ಟು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಎರಡು ರೂಪಾಯಿಗಳಷ್ಟು ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂಪಾಯಿಯಷ್ಟು ಏರಿಕೆ ಮಾಡಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಎಂಬುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಲು ಕಾರಣ ಏನು ಎಂಬುದನ್ನು ಬಿಜೆಪಿ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕು. ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೊಟೇಲ್ ತಿಂಡಿವರೆಗೆ ಎಲ್ಲದರ ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಎನ್ನುವುದು ಆರ್ಥಿಕ ವ್ಯವಹಾರದ ಸಾಮಾನ್ಯ ಜ್ಞಾನ ಇದ್ದವರಿಗೆಲ್ಲ ಗೊತ್ತು. ಹೀಗಿದ್ದರೂ ಬೆಲೆ ಏರಿಕೆಯ ಪಾಪದ ಹೊರೆಯನ್ನು ನಮ್ಮ ತಲೆ ಮೇಲೆ ಕಟ್ಟಲು ಹೊರಟಿರುವ ಬಿಜೆಪಿ ನಾಯಕರ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಮಸಿ ಬಳಿದಿದ್ದಾರೆ. ಜನಾಕ್ರೋಶ ಯಾತ್ರೆ ಹೊರಟವರ ಮುಂದೆ ಈಗ ಇರುವುದು ಎರಡೇ ಆಯ್ಕೆ, ಒಂದೋ ಅವರು ಪ್ರಧಾನಮಂತ್ರಿಯವರ ಮೇಲೆ ಒತ್ತಡ ಹೇರಿ ಕೇಂದ್ರ ಸರ್ಕಾರ ಹೆಚ್ಚಿಸಿರುವ ಬೆಲೆಯನ್ನು ಇಳಿಸುವಂತೆ ಮಾಡಬೇಕು, ಇಲ್ಲವೇ ಯಾತ್ರೆಯನ್ನು ಕೊನೆಗೊಳಿಸಿ ಗಂಟುಮೂಟೆ ಕಟ್ಟಿಕೊಂಡು ತಮ್ಮ ಮನೆಗೆ ಮರಳಬೇಕು. ಇದರ ಹೊರತಾಗಿ ಈ ಯಾತ್ರೆಯ ಪ್ರಹಸನವನ್ನು ಮುಂದುವರಿಸಿದರೆ ಜನರ ಆಕ್ರೋಶಕ್ಕೆ ತುತ್ತಾಗುವುದು ಖಂಡಿತ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.