ಮಂಗಳೂರು: ದಲಿತ ಬಾಲಕಿಗೆ ಕಿರುಕುಳ ನೀಡಿದ ಆರೋಪಕ್ಕೊಳಗಾಗಿರುವ ವಿಟ್ಲ ಮಾಣಿಲದ ಮಹೇಶ್ ಭಟ್‌ಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪೋಕ್ಸೊ ನ್ಯಾಯಾಲಯ ಸೋಮವಾರ ಶರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ಕೃತ್ಯ ಬೆಳಕಿಗೆ ಬಂದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಂತೆಯೇ ಆರೋಪಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ತೋಟದ ಕೆಲಸಕ್ಕೆ ಬರುತ್ತಿದ್ದ ದಲಿತ ಸಮುದಾಯದ ಕೂಲಿ ಕಾರ್ಮಿಕನ 16ರ ಹರೆಯದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಹೇಶ್ ಭಟ್ ವಿರುದ್ಧ ಕೇಳಿಬಂದಿದೆ. ಘಟನೆ ನಡೆದು ಎರಡು ವಾರವಾದರೂ ಆರೋಪಿಯ ಬಂಧನವಾಗದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರ ಕಾರ್ಯವೈಖರಿಯೂ ಟೀಕೆಗೆ ಗುರಿಯಾಗಿದೆ. ದಲಿತ ಸಂಘಟನೆಗಳು ಆರೋಪಿಯನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಹಿತ ಹಲವು ಮುಖಂಡರು ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಆರೋಪಿ ಮಹೇಶ್ ಭಟ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ವಿಶೇಷ ಸರಕಾರಿ ಅಭಯೋಜಕರ, ಅರ್ಜಿದಾರ ಪರ ವಕೀಲರ ಮತ್ತು ಪಿರ್ಯಾದಿದಾರರು ಮತ್ತಾಕೆಯ ಹೆತ್ತವರನ್ನು ನ್ಯಾಯಾಧೀಶರು ವಿಚಾರಣೆಗೊಳಪಡಿಸಿ ಜಾಮೀನು ನೀಡಿದ್ದಾರೆ.
ದಲಿತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ನಿರೀಕ್ಷಣಾ ಜಾಮೀನು
