ಸುಳ್ಯ: ಸಂಪಾಜೆ ಬಳಿ ಕಾರಿನಲ್ಲಿ ಹುಚ್ಚಾಟ ಮೆರೆದ ಪ್ರಕರಣದಲ್ಲಿ ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ತಲೆಮರೆಸಿಕೊಂಡಿದ್ದಾರೆ.
ಭಟ್ಕಳ ಮೂಲದ ಯುವಕರು ಕಾರಿನಲ್ಲಿ ಹುಚ್ಚಾಟ ಮೆರೆದಿರುವ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ BNS ಆಕ್ಟ್ 281 IMV ಆಕ್ಟ್ ನ 184 ಸೆಕ್ಷನ್ ಅಡಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿ ಯುವಕರು ಎಸ್ಕೆಪ್ ಆಗಿದ್ದಾರೆ.
ಸಂಪಾಜೆ-ಸುಳ್ಯ ರಸ್ತೆಯಲ್ಲಿ KA09MG5880 ನಂಬರ್‌ನ ಕಾರಿನಲ್ಲಿ ಒಟ್ಟು ಏಳು ಮಂದಿ ಯುವಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಐವರು ಕಾರಿನ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದಿದ್ದರು. ಚಾಲಕ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಾ ಯುವಕರು ಪುಂಡಾಟ ಮೆರೆದಿದ್ದರು. ಕಾರಿನ ಹಿಂಬದಿ ಬರುತ್ತಿದ್ದ ವಾಹನದಲ್ಲಿದ್ದವರು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.