2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಇಂತಿದೆ
ಬೆಂಗಳೂರು: ಈ ಬೇಸಿಗೆ ರಜೆ ಕಳೆದ ಬಳಿಕ ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಪ್ರಾರಂಭಗೊಳ್ಳಲಿವೆ. ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ 2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೇ 29ರಿಂದ ಶಾಲೆಗಳನ್ನು ಆರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇದು ಅನ್ವಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು, ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ಕೂಡ ಇಲಾಖೆ ಪ್ರಕಟಿಸಿದೆ. ಮೇ 29ರಿಂದ ಸೆಪ್ಟೆಂಬರ್ 19ರವರೆಗೆ ಮೊದಲ ಅವಧಿ ಹಾಗೂ ಅಕ್ಟೋಬರ್ 8ರಿಂದ 2026ರ ಏಪ್ರಿಲ್ 10ರವರೆಗೆ ಎರಡನೇ ಅವಧಿಯಲ್ಲಿ ಶಾಲೆಗಳು ಕರ್ತವ್ಯ ನಿರ್ವಹಿಸಲಿವೆ.
ಸೆ.20 ರಿಂದ ಅ.7ರವರೆಗೆ ದಸರಾ ರಜೆ ಮತ್ತು 2026ರ ಏಪ್ರಿಲ್ 11ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಸಲುವಾಗಿ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಟ್ಟುಕೊಳ್ಳುವಂತೆ ಸೂಚಿಸಿದೆ.
ಪ್ರಸಕ್ತ ಸಾಲಿನಲ್ಲಿ 123 ದಿನಗಳು ರಜೆಯ ದಿನಗಳಾಗಿರುತ್ತವೆ. ಉಳಿದ 242 ದಿನಗಳು ಶಾಲೆ ನಡೆಯಲಿವೆ. 242 ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳನ್ನು ನಿಗದಿ ಮಾಡಲಾಗಿದೆ. ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ ನಿಗದಿಪಡಿಸಲಾಗಿದೆ. ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 4 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.
ಈ ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಏಪ್ರಿಲ್ 8 ಮತ್ತು ಪ್ರೌಢಶಾಲೆಗಳಲ್ಲಿ ಏಪ್ರಿಲ್ 9ರಂದು ಸಮುದಾಯದತ್ತ ಶಾಲೆ ಕಾರ್ಯಕ್ರಮಗಳನ್ನು ನಡೆಸಬೇಕು ಹಾಗೂ ಪೋಷಕರ ಸಭೆ ಕರೆದು ಫಲಿತಾಂಶ ಪ್ರಕಟಿಸಬೇಕು.
ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲ ಶಾಲೆಗಳಲ್ಲಿಯೂ ಆಚರಿಸಬೇಕು. ಕ್ರಿಸ್‌ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಿ ಆನಂತರ ಘೋಷಿಸಬೇಕು. ಸರಕಾರ ನೀಡುವ ಸೌಲಭ್ಯಗಳನ್ನು ಜನರಿಗೆ ತಿಳಿಸಲು ಮಿಂಚಿನ ಸಂಚಾರ ಕೈಗೊಂಡು ದಾಖಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.