ಪುತ್ತೂರು: ಲೋಕೋಪಯೋಗಿ ಇಲಾಖೆಯ 10 ಲಕ್ಷ ರೂ.ಅನುದಾನದಡಿ ಬಲ್ನಾಡು ಗ್ರಾಮದ ಮುಗೆರೋಡಿ – ಪೊನ್ನೆತ್ತಡ್ಕ ರಸ್ತೆ ಹಾಗೂ 1.50 ಕೋಟಿ ರೂ. ವೆಚ್ಚದಲ್ಲಿ ಮುಗೆರೋಡಿ – ಪೊನ್ನೆತ್ತಡ್ಕ ಬಳಿ ಸೇತುವೆ ಸಮೇತ ಕಿಂಡಿ ಅಣೆಕಟ್ಟನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಕಳೆದ ಹಲವಾರು ವರ್ಷಗಳ ಬೇಡಿಕೆ ಇರುವ ಮುಗೆರೋಡಿ – ಪೊನ್ನೆತ್ತಡ್ಕ ರಸ್ತೆ ಹಾಗೂ ಸೇತುವೆ ಸುಮಾರು 200ರಿಂದ 300 ಮನೆಗಳಿಗೆ ಪ್ರಯೋಜನವಾಗುವ ರಸ್ತೆ. ಜತೆಗೆ ಕಿಂಡಿ ಅಣೆಕಟ್ಟಿನಿಂದಲೂ ಪ್ರಯೋಜನವಾಗುತ್ತಿದೆ. ಪ್ರಸ್ತುತ ಗ್ರಾಮಾಂತರ ರಸ್ತೆಗಳು ಕಾಂಕ್ರೀಟಿಕರಣ ಆಗುವ ಮೂಲಕ ಮಳೆಗಾಲದಲ್ಲಾದರೂ, ಬೇಸಿಗೆಯಲ್ಲಾದರೂ ಎಲ್ಲಾ ಮನೆಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಶಾಸಕರು ವಿಶೇಷ ಪ್ರಯತ್ನದಿಂದ ಮಾಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಒದಗಿಸುವ ಮೂಲಕ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ ಹೀಗೆ ಹಲವಾರು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಶಾಸಕರು ಬಹಳಷ್ಟು ಮುತುವರ್ಜಿ ವಹಿಸಿದ್ದಾರೆ. ಶಿಲಾನ್ಯಾಸಗೊಂಡ ರಸ್ತೆಯ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದರು.
25 ವರ್ಷಗಳಲ್ಲಿ ಆಗದ ಪ್ರಗತಿ, ಕಳೆದ 5 ವರ್ಷಗಳಲ್ಲಿ ಆಗಿದೆ: ಮಠಂದೂರು
ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಆದ ಪ್ರಗತಿ ಹಿಂದಿನ 25 ವರ್ಷಗಳಲ್ಲಿ ಆಗಿಲ್ಲ. ಕಳೆದ ಕೆಲ ವರ್ಷಗಳಲ್ಲಿ ಆದ ಪ್ರಗತಿಯನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಬೇರೆ ಬೇರೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕೃಷಿಕ ಸೇರಿದಂತೆ ಇನ್ನಿತರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಮೂಲಕ ಕೃಷಿಕರಿಗೆ ನೀರಿನ ಅಭಾವದ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಬಲ್ನಾಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ಎಸ್. ರೈ, ಉಪಾಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ, ಬಿಜೆಪಿ ಮಂಡಲ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ, ಗ್ರಾಮ ಪಂಚಾಯತಿ ಸದಸ್ಯರು, ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ರೈ ಕಬ್ಬಿನಹಿತ್ತಿಲು, ಬೂತ್ ಅಧ್ಯಕ್ಷರಾದ ದಿನೇಶ್ ರೈ ಮುಗೇರೋಡಿ, ಯೋಗೀಶ್ ನಾಯಕ್, ಬೂತ್ ಕಾರ್ಯದರ್ಶಿಗಳು, ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷೆ ಸುಜಾತ ರೈ ಬೀಡು, ಶಕ್ತಿಕೇಂದ್ರ ಸಂಚಾಲಕ ಅಕ್ಷಯ್ ಶೆಟ್ಟಿ ಕಲ್ಪಾಜೆ, ಬಿಜೆಪಿ ಪಕ್ಷದ ಕಾರ್ಯಕರ್ತ ಬಂಧುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.