ಅಂಬೇಡ್ಕರ್ ಜಯಂತಿಯಿಂದ ಬುದ್ಧ ಜಯಂತಿ ತನಕ ಯಾತ್ರೆ
ಹೊಸದಿಲ್ಲಿ : ಬಿಜೆಪಿಯ ಎಸ್.ಸಿ ಮೋರ್ಚಾ ಅಂಬೇಡ್ಕರ್ ಜಯಂತಿ ದಿನವಾದ ಏ.14ರಿಂದ ಘರ್ ಘರ್ ಜೋಡೊ ಕಾರ್ಯಕ್ರಮ ಆರಂಭಿಸಲಿದೆ. ಇದು ಎಸ್‌ಸಿ ಸಮುದಾಯವನ್ನು ತಲುಪುವ ಬಿಜೆಪಿ ನಡೆಸುವ ಯಾತ್ರೆ. 21 ದಿನಗಳ ಈ ಯಾತ್ರೆ ಅಂಬೇಡ್ಕರ್ ಜಯಂತಿಯಂದು ಆರಂಭವಾಗಿ ಬುದ್ಧ ಜಯಂತಿ ದಿನವಾದ ಮೇ 5ರಂದು ಕೊನೆಗೊಳ್ಳಲಿದೆ.
ಈ ಕಾರ್ಯಕ್ರಮಕ್ಕಾಗಿ ಬಿಜೆಪಿ ಎಸ್‌ಸಿ ಮೋರ್ಚಾ 11 ಸದಸ್ಯರ ರಾಷ್ಟ್ರೀಯ ಸಮಿತಿಯನ್ನು ರಚಿಸಿದೆ. ಅದೇ ರೀತಿ ರಾಜ್ಯ ಮತ್ತು ಜಿಲ್ಲಾವಾರು ಸಮಿತಿಗಳನ್ನು ಕೂಡ ತಲಾ 11 ಸದಸ್ಯರನ್ನೊಳಗೊಂಡಂತೆ ರಚಿಸಲಾಗುತ್ತಿದೆ. ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳು ಪರಿಶಿಷ್ಟ ಜಾತಿ ಸಮಾಜಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ತಿಳಿಸಿದೆ.
ಇದು ಸಮಾಜಕ್ಕೆ ಮಾಡುವ ಸೇವೆಯಾಗಿದೆ. ಈ ಅಭಿಯಾನದ ಮೂಲಕ ಸರಕಾರದ ಎಲ್ಲ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯಲು ಎಸ್‌ಸಿ ಸಮುದಾಯಕ್ಕೆ ಸಾಧ್ಯವಾಗುವಂತೆ ನಾವು ಕೆಲಸ ಮಾಡುತ್ತೇವೆ. ಕೊಳೆಗೇರಿಗಳು ಸೇರಿದಂತೆ ಮನೆಮನೆಗೆ ಹೋಗಿ ಪ್ರಚಾರ ಕೈಗೊಳ್ಳಲಾಗುತ್ತದೆ. ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಫಾರ್ಮ್‌ಗಳನ್ನು ಭರ್ತಿ ಮಾಡಲು ಸಹ ಅವರಿಗೆ ನೆರವು ನೀಡಲಿದ್ದೇವೆ ಎಂದು ಸುದ್ದಿಸಂಸ್ಥೆ ಎ.ಎನ್.ಐಗೆ ಬಿಜೆಪಿ ಎಸ್‌ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಮಾಹಿತಿ ನೀಡಿದ್ದಾರೆ.
21 ದಿನಗಳ ಪ್ರಚಾರದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಿದೆ. ಈ ಕಾರ್ಯಕ್ರಮದ ವೇಳೆ ಸ್ವಚ್ಛತಾ ಅಭಿಯಾನವೂ ನಡೆಯಲಿದೆ ಎಂದರು.ಪರಿಶಿಷ್ಟ ಜಾತಿ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಎಸ್‌ಸಿ ಮೋರ್ಚಾ ಹೆಚ್ಚಿನ ಗಮನ ನೀಡಲಿದೆ.