200 ಕೋ. ರೂ. ಹಗರಣಕ್ಕೆ ಸಿದ್ದರಾಮಯ್ಯ ಸ್ಪಷ್ಟೀಕರಣ
ಬೆಂಗಳೂರು : ಕಾಂಗ್ರೆಸ್ ಆಡಳಿತದ ಐದು ವರ್ಷಗಳಲ್ಲಿ ಕಾಫಿ, ತಿಂಡಿ, ಬಿಸ್ಕತ್‌ಗೆ 200 ಕೋ.ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್ ರಮೇಶ್ ಮಾಡಿರುವ ಆರೋಪವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, 2013-14 ರಿಂದ 2017-18 ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 3.26 ಕೋ. ರೂ. ಕಾಫಿ, ತಿಂಡಿ ಮತ್ತು ಊಟ ಇತ್ಯಾದಿ ಆತಿಥ್ಯದ ವೆಚ್ಚಕ್ಕೆ ಖರ್ಚಾಗಿದ್ದರೆ, 200 ಕೋ.ರೂ. ಖರ್ಚು ಮಾಡಿದ್ದಾರೆ ಎಂದು ಸುಳ್ಳನ್ನು ಉತ್ಪಾದಿಸಿ ನಾಡಿನ ಜನತೆಗೆ ದ್ರೋಹ ಬಗೆದಿದ್ದಾರೆ. ಇದು ಐಪಿಸಿ ಕಲಂ 420ಗೆ ಅರ್ಹವಾದ ಪ್ರಕರಣ ಎಂದು ಹೇಳಿದ್ದಾರೆ.
ಇಡೀ ಬಿಜೆಪಿಯೆ ಸುಳ್ಳಿನ ಕಾರ್ಖಾನೆ ಎಂಬುದು ಪದೇ ಪದೆ ಪ್ರೂವ್ ಆಗುತ್ತಿದೆ. ಇಂದೂ ಸಹ ಮರಿ ಸುಳ್ಳಿನ ಮಷಿನ್ ಒಂದು ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ ತಿಂಡಿಗೆಂದು 200 ಕೋಟಿ ರೂ. ಖರ್ಚು ಮಾಡಿದೆ ಎಂಬುದೊಂದು ಸುಳ್ಳನ್ನು ಉತ್ಪಾದಿಸಿ ಮೀಡಿಯಾಗಳಿಗೆ ಬಿಡುಗಡೆ ಮಾಡಿದೆ. ಈ ಬಿಜೆಪಿಗರು ಕರ್ನಾಟಕದ ಜನರನ್ನೇನು ಮೂರ್ಖರು ಎಂದುಕೊಂಡಿದ್ದಾರಾ? ಇವರಿಗೆ ಆತ್ಮಸಾಕ್ಷಿ ಎಂಬುದೇನಾದರೂ ಇದೆಯಾ ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ಇವುಗಳೇನೂ ಇಲ್ಲದ ಕಾರಣಕ್ಕೆ ಇವರನ್ನು ಸುಳ್ಳಿನ ಕಾರ್ಖಾನೆಯ ಯಂತ್ರಗಳು ಎಂದು ಕರೆಯುವುದು. 40 ಪರ್ಸೆಂಟ್ ಹಗರಣ, ಮಾಡಾಳ್ ವಿರೂಪಾಕ್ಷಪ್ಪನವರ ಹಗರಣದಿಂದ ಕಂಗಾಲಾಗಿರುವ ಬಿಜೆಪಿಯು ಇಂಥ ಸುಳ್ಳುಗಳನ್ನು ಉತ್ಪಾದಿಸಿಕೊಂಡು ಓಡಾಡುತ್ತಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪನವರ ಲಂಚವತಾರ ಪ್ರಕರಣದ ವಿಷಯಾಂತರ ಮಾಡಲು ಈ ರೀತಿಯ ಚೀಪ್ ಗಿಮಿಕ್‌ಗಳ ಹೀನಾತಿಹೀನ ರಾಜಕಾರಣ ಮಾಡಲು ಬಿಜೆಪಿ ಪ್ರಾರಂಭಿಸಿದೆ ಎನ್ನುವುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಸರ್ಕಾರವೆ ಇಂದು ನನಗೆ ನೀಡಿರುವ ಮಾಹಿತಿಯಂತೆ ನಮ್ಮ ಸರ್ಕಾರದ ಅವಧಿಯಲ್ಲಿ ಊಟ, ತಿಂಡಿಗೆ ಖರ್ಚಾಗಿರುವ ಮೊತ್ತ 3.26 ಕೋಟಿ ರೂ. ಮಾತ್ರ. 200 ಕೋ.ರೂ ಎಂಬುದು ಬಿಜೆಪಿಯ ಸುಳ್ಳಿನ ಕಾರ್ಖನೆಯ ಉತ್ಪಾದನೆ ಎಂದು ಹೇಳಿದ್ದಾರೆ.