ಪೊಲೀಸ್ ದೂರು ದಾಖಲಿಸಿದ ಕಮಿಷನರ್ ನೂರ್ ಝಹರಾ ಖಾನಂ
ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಮೇಲೆ ಬ್ರೋಕರ್‌ಗಳು ಮಾಟಮಂತ್ರ ಮಾಡಲು ಮುಂದಾದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಕಮಿಷನರ್ ಇಬ್ಬರು ದಲ್ಲಾಳಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮುಡಾ ಕಚೇರಿಯಲ್ಲಿ ಬ್ರೋಕರ್‌ಗಳ ಕಾರುಬಾರು ಜೋರಾಗಿದ್ದು, ಅವರನ್ನು ನಿಯಂತ್ರಸಲು ಮುಂದಾದ ಕಮಿಷನರ್ ನೂರ್ ಝಹರಾ ಖಾನಂ ಅವರಿಗೆ ಬ್ರೋಕರ್‌ಗಳು ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ.
ಇತ್ತೀಚೆಗೆ ಒಬ್ಬ ಬ್ರೋಕರ್ ಸಿಬ್ಬಂದಿ ಇಲ್ಲದ ವೇಳೆ ಮುಡಾ ಕಚೇರಿಯೊಳಗೆ ಹೋಗಿ ದಾಖಲೆಯನ್ನು ತಿದ್ದುಪಡಿ ಮಾಡಿದ ವೀಡಿಯೊ ಸಿಕ್ಕಾಒಟ್ಟೆ ವೈರಲ್ ಆಗಿ ಮುಡಾ ತಲೆತಗ್ಗಿಸುವಂತೆ ಆಗಿತ್ತು. ಇದರ ಬಳಿಕ ಕಮಿಷನರ್ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಹೊರಗಿನವರಿಗೆ ಕಚೇರಿಯೊಳಗೆ ಪ್ರವೇಶಿಸಲು ಹಲವು ನಿರ್ಬಂಧಗಳನ್ನು ವಿಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರೋಕರ್‌ಗಳೆಲ್ಲ ಒಟ್ಟಾಗಿ ಅವರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ.
ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಾಬಿತ್ (25) ಎಂಬವರ ವಿರುದ್ಧ ಕಮಿಷನರ್ ನೂರ್ ಝಹರಾ ಖಾನಂ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿದೆ. ಮೌಢ್ಯ ನಿರ್ಬಂಧ ಕಾಯ್ದೆ 2020ರ ಅಡಿಯಲ್ಲೇ ಕೇಸು ದಾಖಲಿಸಬೇಕೆಂದು ಕಮಿಷನರ್ ದೂರು ನೀಡಿದ್ದರು. ಬಿಎನ್ಎಸ್ ಸೆಕ್ಷನ್ 132, 351, 356(1), 61(2), 352 ರಡಿ ಎಫ್ಐಆರ್ ದಾಖಲಿಸಿರುವ ಉರ್ವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಲ್ಲಾಳಿಗಳು ಒಟ್ಟು ಸೇರಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಅದರಲ್ಲಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅವಮಾನಕರ ಸಂದೇಶಗಳನ್ನು ಪ್ರಕಟಿಸಿದ್ದಾರೆ ಎಂದು ಕಮಿಷನರ್ ನೂರ್ ಝಹರಾ ಖಾನಂ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ದೂರವಾಣಿ ಮೂಲಕವೂ ಜೀವಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ದಲ್ಲಾಳಿಗಳು ಗುಂಪು ಕಟ್ಟಿಕೊಂಡು ಮುಡಾ ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಧಿಕಾರಿಗಳು ಇಲ್ಲದ ವೇಳೆ ಬ್ರೋಕರ್ಗಳದ್ದೇ ಕಾರುಬಾರು ನಡೆಯುತ್ತಿದೆ ಎಂಬ ಆರೋಪವಿದೆ.