ಜೆ.ಪಿ.ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ
ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಉತ್ತರಾಧಿಕಾರಿಯ ಆಯ್ಕೆ ಈ ತಿಂಗಳಲ್ಲೇ ನಡೆಯಲಿದೆ ಎನ್ನಲಾಗಿದೆ. ಏ.4ಕ್ಕೆ ಸಂಸತ್ ಅಧಿವೇಶನ ಮುಗಿಯಲಿದ್ದು, ಬಳಿಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಚುರುಕುಗೊಳಿಸಲಿದೆ. ಬಹುತೇಕ ಏಪ್ರಿಲ್ ಮೂರನೇ ವಾರದಲ್ಲಿ ಹೊಸ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ.
ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಬಾಕಿಯಿದ್ದು, ಅದನ್ನು ತ್ವರಿತವಾಗಿ ಮುಗಿಸಿದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪಕ್ಷದ ಹೈಕಮಾಂಡ್ ಶುರು ಮಾಡಲಿದೆ. ಈಗಾಗಲೇ 13 ರಾಜ್ಯಗಳ ಸಂಘಟನಾತ್ಮಕ ಆಯ್ಕೆ ಪ್ರಕ್ರಿಯೆಗಳು ಮುಗಿದು ಅಧ್ಯಕ್ಷರನ್ನು ಘೋಷಿಸಲಾಗಿದೆ. ಉಳಿದ 19 ರಾಜ್ಯಗಳ ರಾಜ್ಯಾಧ್ಯಕ್ಷರ ಘೋಷಣೆಯಾದ ಬೆನ್ನಿಗೆ ರಾಷ್ಟ್ರೀಯ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ.
ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಅರ್ಧದಷ್ಟಾದರೂ ರಾಜ್ಯಗಳಲ್ಲಿ ಸಂಘಟನಾತ್ಮಕ ಚುನಾವಣೆ ಮುಗಿದಿರಬೇಕೆಂಬ ನಿಯಮ ಬಿಜೆಪಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜಟಿಲವಾಗಿರುವ ಕರ್ನಾಟಕ, ತಮಿಳುನಾಡು ಹೊರತುಪಡಿಸಿ ಉಳಿದ ರಾಜ್ಯಗಳ ಅಧ್ಯಕ್ಷರ ನೇಮಕಾತಿ ಸದ್ಯದಲ್ಲೇ ಮುಗಿಯಲಿದೆ. ಜೆ.ಪಿ.ನಡ್ಡಾ 2019ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರ ಅವಧಿ 3 ವರ್ಷವಾಗಿದ್ದರೂ ನಡ್ಡಾ ಅವರಿಗೆ ಬೇರೆ ಬೇರೆ ಕಾರಣಗಳಿಂದಾಗಿ ವಿಸ್ತರಣೆ ನೀಡಲಾಗಿತ್ತು.