ಇಂದು ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

ಪಕ್ಷಗಳಿಂದ ವಿಪ್‌ ಜಾರಿ-ಭಾರಿ ಕೋಲಾಹಲದ ನಿರೀಕ್ಷೆ

ನವದೆಹಲಿ: ಈಗಾಗಲೇ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಮಹತ್ವದ ವಕ್ಫ್‌ ಮಸೂದೆಯನ್ನು ಕೇಂದ್ರ ಸರಕಾರ ಇಂದು ವಿಪಕ್ಷಗಳು ಮತ್ತು ಮುಸ್ಲಿಮರ ವಿರೋಧದ ನಡುವೆ ಲೋಕಸಭೆಯಲ್ಲಿ ಮಂಡಿಸಲಿದೆ. ಮಧ್ಯಾಹ್ನ 12.15ಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಲಿದ್ದಾರೆ. ಮುಸ್ಲಿಮರು ವಕ್ಫ್‌ ಮಸೂದೆ ತಿದ್ದುಪಡಿಯನ್ನು ವಿರೋಧಿಸುತ್ತಿದ್ದು, ದೇಶದ ಹಲವೆಡೆ ಪ್ರತಿಭಟನೆಯೂ ನಡೆದಿದೆ.

ವಕ್ಫ್ ಮಸೂದೆ ಮೇಲಿನ ವಿಸ್ತೃತ ಚರ್ಚೆಗಾಗಿ 8 ಗಂಟೆ ಮೀಸಲು ಇಡಲಾಗಿದೆ. ಈ ಮಸೂದೆಯನ್ನು ಎನ್‌ಡಿಎ ಒಕ್ಕೂಟದ 298 ಸಂಸದರು ಬೆಂಬಲಿಸುವ ಸಾಧ್ಯತೆ ಇದೆ. ಇಂದೇ ವೋಟಿಂಗ್ ನಡೆಯುವ ಸಾಧ್ಯತೆ ಇರುವ ಕಾರಣ ಎನ್‌ಡಿಎಯ ಎಲ್ಲ ಸಂಸದರು ಕಡ್ಡಾಯವಾಗಿ ಕಲಾಪಕ್ಕೆ ಬರಬೇಕೆಂದು ಆಯಾ ಪಕ್ಷಗಳು ವಿಪ್‌ ಜಾರಿ ಮಾಡಿವೆ.





























 
 

ನಿನ್ನೆ ವಕ್ಫ್ ಬಿಲ್ ಮೇಲಿನ ಚರ್ಚೆಗೆ ಸಮಯ ನಿಗದಿ ಮಾಡಲು ಸ್ಪೀಕರ್ ಕರೆದಿದ್ದ ಬಿಎಸಿ ಸಭೆಯಲ್ಲೂ ಕಡಿಮೆ ಸಮಯ ಎಂದು ಹೇಳಿ ವಿಪಕ್ಷಗಳು ಆಕ್ಷೇಪ ಎತ್ತಿ ಸಭೆಯನ್ನು ಬಹಿಷ್ಕರಿಸಿದ್ದವು. ವಿಪಕ್ಷಗಳ ಧೋರಣೆಗೆ ಕಿರಣ್ ರಿಜಿಜು ಆಕ್ರೋಶ ಹೊರಹಾಕಿದ್ದಾರೆ. ಇಂದು ಲೋಕಸಭೆಯಲ್ಲಿ ವಕ್ಫ್‌ ಮಸೂದೆ ಮಂಡನೆಯಾದ ಬಳಿಕ ಭಾರಿ ಕೋಲಾಹಲ ಉಂಟಾಗುವ ಸಾಧ್ಯತೆಯಿದೆ.

ಮಸೂದೆ ಅನುಮೋದನೆಗೆ 272 ಸದಸ್ಯರ ಬೆಂಬಲ ಅಗತ್ಯ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 298 ಸದಸ್ಯರನ್ನು ಹೊಂದಿದೆ. ವಿಪಕ್ಷ ಇಂಡಿಯ ಮೈತ್ರಿಕೂಟದಲ್ಲಿರುವುದು 233 ಸದಸ್ಯರು. 11 ತಟಸ್ಥ ಸಂಸದರು ಇದ್ದಾರೆ. ಹೀಗಾಗಿ ಮಸೂದೆ ಲೋಕಸಭೆಯಲ್ಲಿ ಪಾಸ್‌ ಆಗಬಹುದು.

ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ ಎಂದು ಸರ್ಕಾರ ಹೇಳಿದೆ. ಆದರೂ ಇದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಆಸ್ತಿ ಹಕ್ಕುಗಳ ಮೇಲೆ ದಾಳಿ ಎಂದು ವಿರೋಧ ಪಕ್ಷಗಳು ಮತ್ತು ಮುಸ್ಲಿಂ ನಾಯಕರು ಆರೋಪಿಸಿದ್ದಾರೆ. ಇದರ ಭಾಗವಾಗಿ ರಮ್ಜಾನ್ ದಿನವೇ ದೇಶಾದ್ಯಂತ ಮುಸ್ಲಿಮರು ಕಪ್ಪುಬಟ್ಟೆ ಧರಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಪ್ರತಿಭಟನೆ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top