ದಾಖಲೆ ಸಹಿತ ಬಿಜೆಪಿ ಆರೋಪ
ಬೆಂಗಳೂರು : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕಿಟ್ಗಳ ಹೆಸರಿನಲ್ಲಿ 200 ಕೋಟಿ ರೂ.ಗೂ ಹೆಚ್ಚು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಬರೀ ಕಾಫಿ, ಬಿಸ್ಕಿಟ್ಗೆ 200 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಎನ್.ಆರ್.ರಮೇಶ್ ದಾಖಲೆ ಸಮೇತ ಸಿದ್ದರಾಮಯ್ಯ ವಿರುದ್ಧ 200 ಕೋಟಿ ಹಗರಣದ ನಾಹಿತಿ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR)ಅಂದಿನ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. 2013-14ರಿಂದ 2017-18ರ ವರೆಗಿನ 5 ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 ಕೋಟಿ ರೂ.ಗೂ ಹೆಚ್ಚು ಹಣ ಲೂಟಿಯಾಗಿದೆ ಎಂದು ಎನ್.ಆರ್. ರಮೇಶ್ ಹೇಳಿದ್ದಾರೆ.
ಈ 5 ವರ್ಷಗಳ ಅವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯಗಳಿಗೆ ಕಾಫಿ, ಟೀ, ತಿಂಡಿ, ಉಪಹಾರ ಪೂರೈಕೆ ಕಾರ್ಯಗಳಿಗೆಂದು ವೆಚ್ಚ ಮಾಡಿರುವ ಒಟ್ಟು ಮೊತ್ತ 200,62,93,027 ರೂ. 5 ವರ್ಷಗಳಲ್ಲಿ 410 ರಜಾ ದಿನಗಳನ್ನೂ ಸೇರಿಸಿಕೊಂಡರೆ ಪ್ರತಿಯೊಂದು ದಿನಕ್ಕೆ ಸರಾಸರಿ 11 ಲಕ್ಷ ರೂಪಾಯಿ ವೆಚ್ಚವಾಗಿದೆ. 410 ರಜಾ ದಿನಗಳನ್ನು ಹೊರತುಪಡಿಸಿದರೆ ಪ್ರತಿಯೊಂದು ದಿನಕ್ಕೆ ಸರಾಸರಿ 14 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಆರ್ಟಿಐ ಕಾಯ್ದೆಯಡಿ ಉತ್ತರ ಪಡೆದು ದಾಖಲೆಗಳನ್ನು ನೀಡಿದ್ದಾರೆ.
ಅಧಿಕೃತ ದಾಖಲೆಗಳು ಹೇಳುವಂತೆ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಅತಿಥಿ – ಗಣ್ಯರ ಉಪಚಾರಗಳಿಗೆಂದು ವೆಚ್ಚ ಮಾಡಿರುವ ವರ್ಷಾವಾರು ವಿವರ ಈ ಕೆಳಕಂಡಂತಿದೆ.
2013-14 : 36,03,03,078 ರೂ.
2014-15 : 38,26,68,575 ರೂ.
2015-16 : 36,66,19,743 ರೂ.
2016-17 : 44,73,92,077 ರೂ.
2017-18 : 44,93,09,554 ರೂ.
ಒಟ್ಟು : 200,62,93,027 ರೂ.
ಕಳೆದ 75 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಯ ಅವಧಿಯಲ್ಲಿ ನಡೆಯದ “ಅತಿಥಿ ಉಪಚಾರ”ದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ದರಾಮಯ್ಯನವರ ಅವಧಿಯಲ್ಲಿ ನಡೆದಿದೆ. ಸರ್ಕಾರದ ಯಾವೊಂದು ಯೋಜನೆಗಳನ್ನೂ ಬಿಡದೆ, ಎಲ್ಲದರಲ್ಲೂ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದ ಸಿದ್ದರಾಮಯ್ಯನವರ ಸರ್ಕಾರ ಕೊನೆಗೆ ಕಾಫಿ, ತಿಂಡಿ, ಉಪಹಾರದ ಹೆಸರಿನಲ್ಲೂ ಬೃಹತ್ ಮೊತ್ತದ ವಂಚನೆ ಎಸಗಿದೆ ಎಂದು ಎನ್ಆರ್ ರಮೇಶ್ ಹೇಳಿದ್ದಾರೆ.
200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಈ ಬೃಹತ್ ಹಗರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಲಾಗಿದೆ. ಜೊತೆಗೆ ಈ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಅವಧಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಎನ್.ಆರ್. ರಮೇಶ್ ದೂರು ದಾಖಸಿದ್ದಾರೆ.