ಎರಡೂವರೆ ತಿಂಗಳು ಸರಕಾರಿ ಖರ್ಚಿನಲ್ಲಿ ಚಿಕಿತ್ಸೆ
ಬೆಂಗಳೂರು : ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಉಗ್ರ ಮೊಹಮ್ಮದ್ ಶಾರಿಕ್ ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವನನ್ನು ವಶಕ್ಕೆ ತೆಗೆದುಕೊಂಡಿದೆ.
ಕಳೆದ ನ.19 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್‌ನಲ್ಲಿ ಬಾಂಬಿಟ್ಟುಕೊಂಡು ಸಾಗಿಸುತ್ತಿದ್ದಾಗ ಅದು ಸ್ಫೋಟಿಸಿ ಶಾರಿಕ್ ಜತೆ ರಿಕ್ಷಾ ಚಾಲಕ ಪುರುಷೋತ್ತಮ್ ಗಾಯಗೊಂಡಿದ್ದರು. 24 ವರ್ಷದ ತೀರ್ಥಹಳ್ಳಿ ಮೂಲದ ಆರೋಪಿ ಶಾರಿಕ್ ಗಂಭೀರ ಸ್ವರೂಪದ ಗಾಯವಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಅವನನ್ನು ಬೆಂಗರಿಗೆ ಕರೆದೊಯ್ಯಲಾಗಿತ್ತು.
ಸ್ಫೋಟದ ಹೊಗೆ ಅವನ ಶ್ವಾಸಕೋಶವನ್ನು ತುಂಬಿದ ನಂತರ ಮಾತನಾಡುವ ಸಾಮರ್ಥ್ಯ ಕಳೆದುಕೊಂಡಿದ್ದ. ಎರಡೂವರೆ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ. ಮೊಹಮ್ಮದ್ ಶಾರಿಕ್ ಅವರನ್ನು ಡಿಸೆಂಬರ್ 17, 2022 ರಂದು ಮಂಗಳೂರಿನ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಎರಡು ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿವೆ. ಐಸಿಸ್‌ನ ಖೊರಾಸನ್ ಭಯೋತ್ಪಾದಕ ಸಂಘಟನೆ ಏರಡು ದಿನಗಳ ಹಿಂದೆಯಷ್ಟೇ ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.