ಅನಾರೋಗ್ಯಕರ ಪರಿಸರದಲ್ಲಿ ಐಸ್‌ಕ್ರೀಂ ತಯಾರಿ ಪತ್ತೆ
ಬೆಂಗಳೂರು: ಬಿರುಬಿಸಿಲಿದೆ, ಸೆಖೆಯಾಗುತ್ತಿದೆ ಎಂದು ಐಸ್‌ಕ್ರೀಂ ತಿನ್ನಲು ಹೋದಿರಾ ಜೋಕೆ! ಐಸ್‌ಕ್ರೀಂನಲ್ಲೂ ಇದೆ ವಿಷಕಾರಿ ಅಂಶ. ಇದಕ್ಕೂ ಮಿಗಿಲಾಗಿ ಐಸ್‌ಕ್ರೀಂ ತಯಾರಿ ಮತ್ತು ಸಂಗ್ರಹ ಅನಾರೋಗ್ಯಕಾರಿ ಪರಿಸರದಲ್ಲಿ ನಡೆಯುತ್ತಿರುವುದನ್ನು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಐಸ್‌ಕ್ರೀಂಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ರವಾನೆ ಮಾಡಿದ್ದಾರೆ.
ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಆಹಾರ ಪದಾರ್ಥಗಳನ್ನು ತಪಾಸಣೆ ಮಾಡುತ್ತಿದ್ದು, ಈಗ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಐಸ್‌ಕ್ರೀಂನ್ನು ಜನರು ಜಾಸ್ತಿ ಸೇವನೆ ಮಾಡುತ್ತಾರೆ. ಐಸ್‌ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದೆ.
ಲೋಕಲ್ ಬ್ರಾಂಡ್‌ನ ಬಹುತೇಕ ಐಸ್‌ಕ್ರೀಂಗಳನ್ನು ಅನಾರೋಗ್ಯಕರ ಪರಿಸರದಲ್ಲಿ ತಯಾರಿಸಿ ಸಂಗ್ರಹಿಸಿಡಲಾಗುತ್ತಿದೆ. ಕೆಲವೆಡೆಗಳಿಂದ ಸಂಗ್ರಹಿಸಿದ ಐಸ್‌ಕ್ರೀಂಗಳಲ್ಲಿ ಮೃದುವಾದ ಕೆನೆ ಸೃಷ್ಟಿಸಲು ಡಿಟರ್ಜಂಟ್ ಅಂಶ ಹೊಂದಿರುವ ರಾಸಾಯನಿಕ ಬಳಸುವುದು ಪತ್ತೆಯಗಿದೆ. ಕೋಲ್‌ಡ್ರಿಂಕ್ಸ್‌ಗಳಲ್ಲಿ ನೊರೆ ಸೃಷ್ಟಿಸಲು ಫಾಸ್ಪರಿಕ್ ಆಸಿಡ್ ಸೇರಿಸುತ್ತಾರೆ. ಇದರ ಸತತ ಸೇವನೆಯಿಂದ ಮೂಳೆಗಳು ದುರ್ಬಲವಾಗುತ್ತವೆ.
ಕೆಲವು ಐಸ್‌ಕ್ರೀಂ ಘಟಕಗಳಲ್ಲಿ ಡಿಟರ್ಜಂಟ್‌ನಿಂದ ತಯಾರಿಸಿದ ಸಿಂಥೆಟಿಕ್ ಹಾಲು, ಯೂರಿಯಾ ಮತ್ತು ಸ್ಟಾರ್ಚ್ ಬಳಸಿ ತಯಾರಿಸುತ್ತಿರುವುದು ಪತ್ತೆಯಾಗಿದೆ. ಸಕ್ಕರೆ ಬದಲಾಗಿ ಅಗ್ಗಕ್ಕೆ ಸಿಗುವ ಸ್ಯಾಕ್ರಿನ್ ಎಂಬ ರಾಸಾಯನಿಕ ಬಳಸುತ್ತಾರೆ ಎಂದು ಆಹಾರ ಇಲಾಖೆ ಮೂಲವೊಂದು ತಿಳಿಸಿದೆ.