ಪುತ್ತೂರು : ನಟ ದರ್ಶನ್ ತನ್ನ ಸಂಕಷ್ಠಗಳು ನಿವಾರಣೆಯಾಗಲಿ ಎಂದು ಫ್ಯಾಮಿಲಿ ಸಮೇತರಾಗಿ ಕೇರಳದ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವಿಚಾರದಲ್ಲಿ ಪುತ್ತೂರಿನಲ್ಲಿ ಎರಡು ತಂಡಗಳ ನಡುವೆ ಬಾರಿ ಜಗಳಗಳಾಗಿವೆ.
ವಾರದ ಹಿಂದೆ ನಟ ದರ್ಶನನ್ನು ಪುತ್ತೂರಿನ ಪ್ರಜ್ವಲ್ ರೈ ಪಾತಾಜೆ ಎಂಬವರು ಮಾಡಾಯಿಕಾವು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಶತ್ರುಸಂಹಾರ ಪೂಜೆ ನೆರವೇರಿಸಿದ್ದರು. ಈ ವೇಳೆ ದರ್ಶನ ಜೊತೆಯಲ್ಲೇ ಮಾಡಾಯಿಕಾವು ದೇವಸ್ಥಾನದಲ್ಲಿ ದರ್ಶನ್ ಜೊತೆ ಪ್ರಜ್ವಲ್ ರೈ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಪ್ರಜ್ವಲ್ ರೈ ತನ್ನ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದು, ಬಳಿಕ ಇದು ಮಾಧ್ಯಮಗಳಿಗೆ ಸಿಕ್ಕಿತ್ತು. ಫೋಟೋ ಮಾಧ್ಯಮಕ್ಕೆ ಹೋದ ವಿಚಾರವಾಗಿಯೇ ಈ ಗಲಾಟೆ ನಡೆದಿದೆ ಅನ್ನೋದು ಸದ್ಯಕ್ಕೆ ಇರುವ ಮಾಹಿತಿ.
ಫೋಟೋವನ್ನು ದೀಕ್ಷಿತ್ ರೈ ತಂಡ ಮಾಧ್ಯಮಕ್ಕೆ ನೀಡಿದ್ದಾರೆ ಎಂದು ಪ್ರಜ್ವಲ್ ರೈ ಕೋಪಗೊಂಡಿದ್ದು ಇಬ್ಬರ ನಡುವೆ ಮನಸ್ತಾಪ ಬೆಳೆದಿದೆ. ನಿನ್ನೆ(ಮಾ.27) ಸಂಜೆ ಪುತ್ತೂರಿನ ದರ್ಬೆಲ್ಲಿನ ಪ್ರಜ್ವಲ್ ರೈ ಮಾಲಕತ್ವದ ಹೋಟೆಲ್‌ಗೆ ನುಗ್ಗಿ ದೀಕ್ಷಿತ್ ರೈ ತಂಡ ಗಲಾಟೆ ಮಾಡಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ, ಎರಡೂ ತಂಡಕ್ಕೆ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ.
ಪೋಲಿಸರು ವಾರ್ನಿಂಗ್ ಮಾಡಿ ಮನೆಗೆ ಕಳುಹಿಸಿದರು ಸಹ ಸಂಜೆ ಉಪ್ಪಿನಂಗಡಿಯ ನೆಕ್ಕಿಲಾಡಿ ಬಳಿ ಮತ್ತೆ ಈ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಬದಿಯಡ್ಕದ ಕೆಲ ಯುವಕರು ನೆಕ್ಕಿಲಾಡಿಗೆ ಬಂದು ದೀಕ್ಷಿತ್ ರೈ ಹಾಗೂ ಜೊತೆಗಿದ್ದವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ದೀಕ್ಷಿತ್ ರೈ ಅವರ ತಲೆಗೆ ಗಾಯವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಯ ಬಗ್ಗೆ ಪೊಲೀಸರು ಆಸ್ಪತ್ರೆಗೆ ತೆರಳಿ ಗಾಯಾಳುಗಳಿಂದ ಮಾಹಿತಿ ಕಲೆ ಹಾಕಿದ್ದಾರೆ.