ಸಂಪಾದಕೀಯ- ಈಗ ಬೆಲೆ ಏರಿಕೆಯೇ ಸರಕಾರದ ಗ್ಯಾರಂಟಿ

ದರ ಹೆಚ್ಚಳದಿಂದ ಜನಸಾಮಾನ್ಯರು ಹೈರಾಣಾದರೂ ಆಳುವವರು ಡೋಂಟ್‌ಕೇರ್‌

ರಾಜ್ಯ ಸರಕಾರ ನಿನ್ನೆ ಮತ್ತೊಮ್ಮೆ ಹಾಲಿನ ಬೆಲೆಯನ್ನು ಲೀಟರಿಗೆ 4 ರೂಪಾಯಿಯಂತೆ ಏರಿಸಿದೆ. ಇದರ ಬೆನ್ನಿಗೆ ವಿದ್ಯುತ್‌ ದರವೂ ಏರಿಕೆಯಾಗಿದ್ದು, ರಾಜ್ಯದ ಜನರಿಗೆ ಒಟ್ಟೊಟ್ಟಿಗೆ ಎರಡೆರಡು ಬರೆ ಬಿದ್ದಿದೆ. ಅಂದು ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆಯನ್ನೇ ಮುಖ್ಯ ವಿಷಯ ಮಾಡಿಕೊಂಡು ಬಡವರಿಗೆ ಗ್ಯಾರಂಟಿ ಕೊಡುಗೆಗಳನ್ನು ಕೊಟ್ಟು ಬೆಲೆ ಏರಿಕೆಯ ಬಿಸಿಯಿಂದ ಪಾರು ಮಾಡುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್‌ ಅಧಿಕಾರ ದಕ್ಕುತ್ತಿದ್ದಂತೆಯೇ ಉಲ್ಟಾ ಹೊಡೆದು ಈಗ ಬೆಲೆ ಏರಿಕೆಯೇ ತನ್ನ ಗ್ಯಾರಂಟಿ ಎಂದು ಜನರಿಗೆ ದ್ರೋಹ ಬಗೆಯುತ್ತಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 20 ತಿಂಗಳಲ್ಲಿ ಹಾಲಿನ ಬೆಲೆ ಏರಿಕೆಯಾಗುತ್ತಿರುವುದು ಇದು ಮೂರನೇ ಸಲ. ಮೂರು ಸಲದ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಒಟ್ಟು 9 ರೂಪಾಯಿ ನಿತ್ಯ ಹಾಲೊಂದರಿಂದಲೇ ಬರೆ ಬಿದ್ದಂತಾಗಿದೆ. ಪೆಟ್ರೋಲು, ಡೀಸೆಲ್‌, ಮುದ್ರಾಂಕ ಶುಲ್ಕ, ಜನನ ಮರಣಗಳ ಪ್ರಮಾಣಪತ್ರ ಶುಲ್ಕ, ಮೋಟಾರು ವಾಹನ ತೆರಿಗೆ, ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ, ಮದ್ಯ, ವಿದ್ಯುತ್‌, ಬಸ್‌ ಟಿಕೆಟ್‌, ಮೆಟ್ರೊ ಟಿಕೆಟ್‌ ದರ… ಹೀಗೆ ಎಲ್ಲೆಲ್ಲ ಬೆಲೆ ಏರಿಕೆ ಸಾಧ್ಯವೋ ಅವೆಲ್ಲವನ್ನೂ ಈ 20 ತಿಂಗಳಲ್ಲಿ ಏರಿಸಿಬಿಟ್ಟಿದೆ. ಸದ್ಯದಲ್ಲೆ ನೀರಿನ ದರವೂ ಏರಿಕೆಯಾಗಲಿದೆ. ಹೀಗೆ ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಎಲ್ಲದರ ದರವನ್ನೂ ಏರಿಸುತ್ತಲೇ ಹೋಗುತ್ತಿದೆ ಕರ್ನಾಟಕದ ಭಂಡ ಸರಕಾರ. ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ಬೆಲೆ ಏರದ ವಸ್ತು ಅಥವಾ ಸೇವೆ ಏನಾದರೂ ಉಳಿದಿದೆಯೇ ಎಂಬುದನ್ನು ಭೂತಕನ್ನಡಿ ಇಟ್ಟು ಹುಡುಕಬೇಕಾದೀತು.

































 
 

ಹಾಲಿನ ಬೆಲೆ ಏರಿಕೆಯನ್ನು ಪ್ರಶ್ನಿಸಿದಾಗಲೆಲ್ಲ ಇದರ ಸಂಪೂರ್ಣ ಲಾಭವನ್ನು ಹೈನುಗಾರರಿಗೆ ಕೊಡುತ್ತಿದ್ದೇವೆ ಎಂಬ ಸಬೂಬು ಆಳುವವರ ಬಳಿ ರೆಡಿ ಇರುತ್ತದೆ. ಅದನ್ನೇ ಈ ಸಲವೂ ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು ಎನ್ನುವುದನ್ನು ಹೈನುಗಾರರನ್ನು ಕೇಳಿದರೆ ತಿಳಿಯುತ್ತದೆ. ಹೈನುಗಾರರಿಗೆ ಈಗಲೂ ಸುಮಾರು 6,500 ಕೋಟಿ ರೂಪಾಯಿ ಪ್ರೋತ್ಸಾಹಧನವನ್ನು ಈ ಸರಕಾರ ಬಾಕಿಯಿರಿಸಿಕೊಂಡಿದೆ. ಹಾಗಾದರೆ ಹಿಂದಿನ ಎರಡು ಸಲ ಹಾಲಿನ ಬೆಲೆ ಹೆಚ್ಚಿಸಿ ಗಳಿಸಿದ ಹಣ ಎಲ್ಲಿಗೆ ಹೋಗಿದೆ? ಉತ್ತರ ಬಹಳ ಸರಳ, ಎಲ್ಲವೂ ಗ್ಯಾರಂಟಿ ನುಂಗಿ ಹಾಕಿದೆ.

ಅಂದು ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಐದು ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್‌ಗೆ ಈಗ ಅಧಿಕಾರ ದಕ್ಕಿದ ಬಳಿಕ ಆ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಹಗಲಿನಷ್ಟೇ ಸತ್ಯವಾಗಿರುವ ವಿಚಾರ. ಕರ್ನಾಟಕ ಎಂದಲ್ಲ ಗ್ಯಾರಂಟಿ ಘೋಷಿಸಿ ಜನರನ್ನು ಮರಳು ಮಾಡಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಆಳ್ವಿಕೆಯ ಹಿಮಾಚಲ ಪ್ರದೇಶ ಮತ್ತು ಪಕ್ಕದ ತೆಲಂಗಾಣದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿಯೇ ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ದೊಡ್ಡ ದೊಡ್ಡ ಘೋಷಣೆ ಮಾಡಿದ್ದು ನಿಜ. ಆದರೀಗ ಅದರ ಅನುಷ್ಠಾನಕ್ಕೆ ಹಣ ಸಾಕಾಗುತ್ತಿಲ್ಲ. ಸರ್ಕಾರಿ ನೌಕರರ ಸಂಬಳ ನೀಡುವುದು ಕೂಡ ಕಷ್ಟವಾಗುತ್ತಿದೆ ಎಂದು ನಿರ್ಲಜ್ಜವಾಗಿ ಹೇಳಿಕೊಂಡದ್ದು ದೊಡ್ಡ ಸುದ್ದಿಯಾಗಿತ್ತು. ಹಿಮಾಚಲ ಪ್ರದೇಶ ಸರಕಾರ ತನ್ನ ನೌಕರರಿಗೆ ಸಂಬಳ ಕೊಡಲು ಕೂಡ ಗತಿಯಿಲ್ಲದ ಸ್ಥಿತಿಗೆ ತಲುಪಿ ಹೇಗಾದರೂ ಅಡ್ಜಸ್ಟಮೆಂಟ್‌ ಮಾಡಿಕೊಂಡು ಹೋಗಿ ಎಂದು ಗೋಗರೆಯುವ ಸ್ಥಿತಿಗೆ ತಲುಪಿದೆ.

ಹಾಗೆಂದು ಈ ಗ್ಯಾರಂಟಿ ಹುಚ್ಚು ಕಾಂಗ್ರೆಸ್‌ಗೆ ಮಾತ್ರ ಸೀಮಿತ ಎಂದು ಭಾವಿಸಬೇಕಾಗಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಜನರನ್ನು ಮರುಳು ಮಾಡಿ ಸುಲಭವಾಗಿ ಓಟು ಪಡೆದುಕೊಳ್ಳಲು ಬಿಟ್ಟಿ ಕೊಡುಗೆಗಳ ಮೊರೆ ಹೋಗುತ್ತಿವೆ. ದೊಡ್ಡ ದೊಡ್ಡ ಕೊಡುಗೆಗಳನ್ನು ಘೋಷಿಸಿಯೇ ಹರ್ಯಾಣ, ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲಿ ಬಿಜೆಪಿ ಗೆದ್ದಿದೆ. ಇದೇ ದಾರಿ ಹಿಡಿದಿರುವ ಈ ರಾಜ್ಯಗಳ ಬಂಡವಾಳವೂ ಶೀಘ್ರವೇ ಬಯಲಾಗಲಿದೆ. ಕರ್ನಾಟಕ ಸರಕಾರ ಗ್ಯಾರಂಟಿಗಳಿಂದ ಯಾವುದೇ ಹೊರೆಯಾಗಿಲ್ಲ ಎಂದು ಹೇಳುತ್ತಿದ್ದರೂ ನಿರಂತರವಾಗಿ ಮಾಡುತ್ತಿರುವ ಬೆಲೆ ಏರಿಕೆ ಮತ್ತು ಅಭಿವೃದ್ಧಿ ಶೂನ್ಯ ಆಡಳಿತವೇ ಅದು ಹಸಿ ಹಸಿ ಸುಳ್ಳು ಎಂಬುದನ್ನು ತಿಳಿಸುತ್ತಿದೆ. ಹಾಗೊಂದು ವೇಳೆ ಗ್ಯಾರಂಟಿಗಳಿಂದ ಹೊರೆಯಾಗದಿದ್ದರೆ ಈ ಪಾಟಿ ಬೆಲೆ ಏರಿಸುವ ಅಗತ್ಯ ಏನಿತ್ತು? ಅಭಿವೃದ್ಧಿ ಪೂರ್ತಿಯಾಗಿ ನಿಂತು ಹೋಗಿರುವುದು ಏಕೆ? ಎಂಬ ಸರಳ ಪ್ರಶ್ನೆಗಳಿಗೆ ನೇರ ಉತ್ತರ ಕೊಡುವ ಪ್ರಾಮಾಣಿಕತೆಯನ್ನು ಆಳುವವರು ತೋರಿಸಬೇಕು.

ಜನರಿಗೆ ಉಚಿತವಾಗಿ ಏನನ್ನೂ ಕೊಡಬೇಡಿ ಎಂದು ಯಾರೂ ಹೇಳುತ್ತಿಲ್ಲ. ಬಡವರ ಉದ್ಧಾರ ಪ್ರತಿಯೊಂದು ಸರಕಾರದ ಆದ್ಯತೆ ಆಗಿರಲೇಬೇಕು. ಆದರೆ ಎರಡು ಸಾವಿರ ಕೊಟ್ಟು ಅದನ್ನು ಸಿಕ್ಕಾಪಟ್ಟೆ ಬೆಲೆ ಏರಿಸಿ ಇನ್ನೊಂದು ರೀತಿಯಲ್ಲಿ ವಸೂಲು ಮಾಡುವುದು ಉದ್ಧಾರವೂ ಅಲ್ಲ, ಕಲ್ಯಾಣವೂ ಅಲ್ಲ. ಅದು ಜನರಿಗೆ ಮಾಡುವ ಅಪ್ಪಟ ಮೋಸ. ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರಬಾರದು, ಬದಲಾಗಿ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರಬೇಕು ಎಂದು ಮೊನ್ನೆಯಷ್ಟೇ ಮುಗಿದ ಅಧಿವೇಶನದಲ್ಲಿ ಯುವ ಶಾಸಕರೊಬ್ಬರು ಬಹಳ ಮಾರ್ಮಿಕವಾಗಿ ಹೇಳಿರುವುದನ್ನು ರಾಜಕಾರಣದಲ್ಲಿ ಪಳಗಿರುವವರು ಅರ್ಥ ಮಾಡಿಕೊಳ್ಳಬೇಕಿದೆ.

ಗ್ಯಾರಂಟಿಗಳನ್ನು ಕೊಡಿ, ಯಾರೂ ಬೇಡ ಎನ್ನುವುದಿಲ್ಲ. ಆದರೆ ಈ ಗ್ಯಾರಂಟಿಗಳಿಗಾಗಿ ಜನರ ಪ್ರಾಣ ಹಿಂಡಬೇಡಿ. ಕೊಡಲೇ ಬೇಕೆಂದಿದ್ದರೆ ನಿಜವಾದ ಬಡವರನ್ನು ಹುಡುಕಿ ವೈಜ್ಞಾನಿಕವಾಗಿ ಅನುಷ್ಠಾನಿಸಿ. ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳು ಗ್ಯಾರಂಟಿ ಆಗಬೇಕೆ ಹೊರತು ತಕ್ಷಣಕ್ಕೆ ತುಸು ಪರಿಹಾರ ಕೊಡುವ ಬಿಟ್ಟಿ ಕೊಡುಗೆಗಳಲ್ಲ ಎಂಬುದನ್ನು ಆಳುವವರು ಇನ್ನಾದರೂ ತಿಳಿದುಕೊಂಡರೆ ಒಳ್ಳೆಯದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top