ಬಜಪೆ ಸಮೀಪ ಬಜರಂಗ ದಳ ಕಾರ್ಯಕರ್ತರ ಸಾಹಸಮಯ ಕಾರ್ಯಾಚರಣೆ
ಮಂಗಳೂರು : ವಧಿಸುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 25 ಜಾನುವಾರುಗಳನ್ನು ಬಜರಂಗ ದಳ ಕಾರ್ಯಕರ್ತರು ರಕ್ಷಿಸಿದ್ದಾರೆ. ನಗರದ ಹೊರವಲಯದ ಬಜಪೆ ಸೂರಲ್ಪಾಡಿಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಮೂಡುಬಿದಿರೆಯತ್ತ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಪಿಕಪ್ ಗೂಡ್ಸ್ ವಾಹನದಲ್ಲಿ ಕಾಲುಗಳನ್ನು ಕಟ್ಟಿ ಅಮಾನುಷವಾಗಿ 25 ಗೋವುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಗೋವುಗಳ ಮುಂಗಾಲುಗಳನ್ನು ವಾಹನದ ಟಾಪ್ನ ಕಬ್ಬಿಣದ ಪಟ್ಟಿಗೆ ಕಟ್ಟಿ ತ್ರಿಶಂಕು ಸ್ಥಿತಿಯಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು.
ಪಿಕಪ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ವಾಹನದಲ್ಲಿದ್ದ ಗೋವುಗಳನ್ನು ರಕ್ಷಣೆ ಮಾಡಿದ ಕಾರ್ಯಕರ್ತರು ವಾಹನವನ್ನು ಬಜಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.